ಬೆಂಗಳೂರು: ಬೆಂಗಳೂರು ಮೂಲದ ವಿಜ್ಞಾನಿ ಮತ್ತು ಅವರ ಸ್ನೇಹಿತರು ನಗರದ ಮರಗಳನ್ನು ಮೊಳೆ ಮುಕ್ತ ನಗರವನ್ನಾಗಿಸಲು ಮುಂದಾಗಿದ್ದಾರೆ. ವಿಜ್ಞಾನಿವೋರ್ವರಿಗೆ ಆದ ವೈಯಕ್ತಿಕ ಅನುಭವವೇ ಈ ಒಂದು ವಿಭಿನ್ನ ಅಭಿಯಾನ ನಡೆಸಲು ಕಾರಣವಾಗಿದೆ.
ನಗರದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಯಲ್ಲಿ ಸಹಾಯಕ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿರುವ ವಿನೋದ್ ಕಾರ್ತವ್ಯ ಅವರಿಗೆ ನ. 15 ರಂದು ತಮ್ಮ ದ್ವಿಚಕ್ರ ವಾಹನದಲ್ಲಿ ಸಂಪಂಗಿ ರಾಮನಗರದಲ್ಲಿರುವ ತಮ್ಮ ಮನೆಯ ಬಳಿ ಹೋಗುತ್ತಿರುವ ವೇಳೆ ಸ್ನೇಹಿತರಿಂದ ದೂರವಾಣಿ ಕರೆ ಬಂತು. ಕರೆ ಸ್ವೀಕರಿಸುವ ಸಲುವಾಗಿ ಅವರು ತಮ್ಮ ಬೈಕನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಮರದ ನೆರಳಿನಲ್ಲಿ ಕರೆ ಸ್ವೀಕರಿಸಿ ಮಾತನಾಡಲಾರಂಭಿಸಿದರು. ಅವರು ಮರದ ಕಡೆಗೆ ವಾಲಿದಾಗ ಮರಕ್ಕೆ ಅಂಟಿಕೊಂಡಿದ್ದ ಮೊಳೆ ಅವರ ತಲೆಯ ಹಿಂಭಾಗಕ್ಕೆ ಚುಚ್ಚಿ ಗಾಯಗೊಳಿಸಿತ್ತು. ಅಂದಿನಿಂದ ವಿನೋದ್ ಅವರು ನಗರದ ಮರಗಳಿಂದ ಮೊಳೆಗಳು ಮತ್ತು ಜಾಹೀರಾತು ಫಲಕಗಳ ಪಿನ್‌ಗಳನ್ನು ತೆಗೆದುಹಾಕಲು ನಿರ್ಧರಿಸಿದರು.
ಈ ಹಿನ್ನೆಲೆ, ಪ್ರತಿ ಭಾನುವಾರ (ನವೆಂಬರ್ 15 ರಿಂದ ಪ್ರಾರಂಭಿಸಿ) ನಾನು ಒಬ್ಬಂಟಿಯಾಗಿ ಅಥವಾ ನನ್ನ ಸ್ನೇಹಿತರೊಂದಿಗೆ ಮರಗಳ ಮೇಲಿನ ಮೊಳೆಗಳು, ಜಾಹೀರಾತು ಫಲಕಗಳ ಪಿನ್ಗಳು ಮತ್ತು ಮರಗಳಲ್ಲಿ ಅಂಟಿಸಿದ ಅಕ್ರಮ ಜಾಹೀರಾತುಗಳಿಂದ ಮುಕ್ತಗೊಳಿಸುತ್ತಿದ್ದೇನೆ ಎಂದು ವಿನೋದ್ ಕಾರ್ತವ್ಯ 'ಈಟಿವಿ ಭಾರತ'ಕ್ಕೆ ತಿಳಿಸಿದರು.