ಬೆಂಗಳೂರು: ಸರ್ಕಾರಿ ಬಸ್ ಸೇವೆ ಹೆಚ್ಚಿಸುವ ಮೂಲಕ ರಾಜ್ಯ ಸರ್ಕಾರ ನೀಡಿರುವ ತಿರುಗೇಟಿನ ನಡುವೆಯೂ ಖಾಸಗಿ ಸಾರಿಗೆ ಸಂಘಟನೆಗಳು ಕರೆ ನೀಡಿದ್ದ ಬೆಂಗಳೂರು ಬಂದ್ ಭಾಗಶಃ ಯಶಸ್ಸು ಕಂಡಿದೆ. ಗೊರಗುಂಟೆ ಪಾಳ್ಯ ಜಂಕ್ಷನ್ ಬಳಿ ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದೆ. ರ‍್ಯಾಪಿಡೋ ಬೈಕ್, ಟ್ಯಾಕ್ಸಿ, ಓಲಾ, ಉಬರ್ ಕ್ಯಾಬ್ ಕಂಪನಿಗಳ ಫೋಟೋಗಳ ಅಣಕು ಶವಯಾತ್ರೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಕಂಡುಬಂತು.
ಪೊಲೀಸರು ಪ್ರತಿಭಟನೆಗಷ್ಟೇ ಅನುಮತಿ ನೀಡಿದ್ದರು. ಆದರೆ, ಖಾಸಗಿ ವಾಹನ ಮಾಲೀಕರು, ಚಾಲಕರು ಸೇರಿದಂತೆ ಕೆಲವು ಸಂಘಟನೆಗಳು ರ‍್ಯಾಲಿ ನಡೆಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
"ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಿಸಿದ ನಂತರ ಖಾಸಗಿ ವಾಹನಗಳನ್ನು ನಂಬಿ ಬದುಕುತ್ತಿದ್ದವರ ಆದಾಯ ಕಡಿಮೆಯಾಗಿದೆ. ಖಾಸಗಿ ವಾಹನ ಚಾಲಕರು, ಮಾಲೀಕರ ಬದುಕು ದುಸ್ತರವಾಗಿದೆ. ಸರ್ಕಾರ ಕೂಡಲೇ ಪರಿಹಾರ ನೀಡಬೇಕು" ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಹೋಟೆಲ್ ಮಾಲೀಕರ ಸಂಘದ ಬೆಂಬಲ: "ಆಟೋ, ಕ್ಯಾಬ್ ಸೇರಿದಂತೆ ಖಾಸಗಿ ವಾಹನ ಚಾಲಕರು ಸಂಕಷ್ಟದಲ್ಲಿದ್ದಾರೆ. ಚಾಲಕರು ಶ್ರಮವಹಿಸಿ ಮಳೆ, ಬಿಸಿಲನ್ನದೆ ಹಗಲು-ರಾತ್ರಿ ದುಡಿಯುತ್ತಾರೆ. ಅವರ ಎಲ್ಲಾ ಬೇಡಿಕೆಗಳು ಸಮಂಜಸವಾಗಿವೆ. ಸರ್ಕಾರ ಕೂಡಲೇ ಬೇಡಿಕೆಗಳನ್ನು ಈಡೇರಿಸಲು ಕ್ರಮವಹಿಸಬೇಕು. ಇಂದಿನ ಸಾರಿಗೆ ಮುಷ್ಕರಕ್ಕೆ ಹೋಟೆಲ್ ಮಾಲೀಕರ ಸಂಘದಿಂದ ನೈತಿಕ ಬೆಂಬಲ ಇರಲಿದೆ" ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ತಿಳಿಸಿದರು.
ಸರ್ಕಾರದಿಂದ ಹೆಚ್ಚುವರಿ ಬಸ್ ವ್ಯವಸ್ಥೆ: ಖಾಸಗಿ ಸಾರಿಗೆ ಚಾಲಕರು, ಮಾಲೀಕರ ಮುಷ್ಕರಕ್ಕೆ ರಾಜ್ಯ ಸರ್ಕಾರ ಸೆಡ್ಡು ಹೊಡೆದಿದೆ. ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಹೆಚ್ಚುವರಿ ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್‌ಗಳನ್ನು ರಸ್ತೆಗಿಳಿಸಲಾಗಿದೆ. ಅಲ್ಲದೇ ಮೆಟ್ರೋ ರೈಲು ಸಹ ಹೆಚ್ಚುವರಿ ಓಡಾಟ ನಡೆಸುತ್ತಿದೆ.