ಕರ್ನಾಟಕ

karnataka

ETV Bharat / state

ಬೆಂಗಳೂರು ಏರ್‌ಪೋರ್ಟ್‌ನಿಂದ ಮನೆಗೆ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸಿದ ಅನಿಲ್​ ಕುಂಬ್ಳೆ - ಈಟಿವಿ ಭಾರತ ಕನ್ನಡ

ಬೆಂಗಳೂರಿನಲ್ಲಿಂದು ಖಾಸಗಿ ಸಾರಿಗೆ ಬಂದ್ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಬಿಎಂಟಿಸಿ ಬಸ್​ನಲ್ಲಿ ಪ್ರಯಾಣಿಸಿ ಗಮನ ಸೆಳೆದರು.

Bengaluru bandh today Anil Kumble traveled by BMTC bus
ಬೆಂಗಳೂರಿನಲ್ಲಿ ಖಾಸಗಿ ಸಾರಿಗೆ ಬಂದ್​: ಬಿಎಂಟಿಸಿ ಬಸ್​ನಲ್ಲಿ ಪ್ರಯಾಣಿಸಿದ ಅನಿಲ್​ ಕುಂಬ್ಳೆ

By ETV Bharat Karnataka Team

Published : Sep 11, 2023, 1:04 PM IST

Updated : Sep 11, 2023, 2:14 PM IST

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟವು ಬೆಂಗಳೂರಿನಲ್ಲಿ ಇಂದು ಖಾಸಗಿ ಸಾರಿಗೆ ಬಂದ್​ಗೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಆಟೋ, ಟ್ಯಾಕ್ಸಿ, ಕ್ಯಾಬ್, ಖಾಸಗಿ ಬಸ್, ಗೂಡ್ಸ್ ವಾಹನ, ಶಾಲಾ ವಾಹನಗಳು ಸೇರಿ ಎಲ್ಲ ಖಾಸಗಿ ವಾಹನಗಳ ಸಂಚಾರ ಸ್ತಬ್ಧವಾಗಿದೆ. ಹೀಗಾಗಿ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಬಿಎಂಟಿಸಿ ವಾಯುವಜ್ರ ಬಸ್​ನಲ್ಲಿ ಪ್ರಯಾಣಿಸಿದರು.

ಖಾಸಗಿ ವಾಹನಗಳ ಸಂಚಾರವಿಲ್ಲದೇ ಇರುವುದರಿಂದ ಅವರು ಬಿಎಂಟಿಸಿ ಬಸ್​ನಲ್ಲಿ ಮನೆಗೆ ತೆರಳಿದ್ದಾರೆ. ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಹಂಚಿಕೊಂಡಿರುವ ಕುಂಬ್ಳೆ, ಬಿಎಂಟಿಸಿ ಬಸ್‌ನಲ್ಲಿ ನಿಂತು ಪ್ರಯಾಣಿಸುತ್ತಿರುವ ಫೋಟೋ ಶೇರ್​ ಮಾಡಿಕೊಂಡಿದ್ದಾರೆ. 'ಇಂದು ವಿಮಾನ ನಿಲ್ದಾಣದಿಂದ ಮನೆಗೆ ಮರಳಲು ಬಿಎಂಟಿಸಿ ಪ್ರಯಾಣ' ಎಂದು ಕ್ಯಾಪ್ಶನ್​ ನೀಡಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ಖಾಸಗಿ ಸಾರಿಗೆ ಬಂದ್‌, ಬೇಡಿಕೆ ಈಡೇರಿಸಲು ಆಗ್ರಹ; ಸರ್ಕಾರದಿಂದ ಹೆಚ್ಚುವರಿ ಬಸ್‌ ವ್ಯವಸ್ಥೆ

ಪ್ರಯಾಣಿಕರ ಜೇಬಿಗೆ ಕತ್ತರಿ:ಬಂದ್​ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿಗಳಿಲ್ಲದೇ ಜನರು ಪರದಾಡುವಂತಾಗಿದೆ. ಇದನ್ನೇ ಕೆಲ ವಾಹನ ಸವಾರರು ಬಂಡವಾಳ ಮಾಡಿಕೊಂಡು, ವೈಟ್​ ಬೋರ್ಡ್​ ಕಾರುಗಳನ್ನು ತಂದು ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ. ಏರ್​ಪೋರ್ಟ್​ನಿಂದ ನಗರಕ್ಕೆ ತೆರಳುವ ಪ್ರಯಾಣಿಕರಿಂದ ಹೆಚ್ಚು ಹಣ ಪಡೆಯಲಾಗುತ್ತಿದೆ. ವೈಟ್ ಬೋರ್ಡ್​ ಕಾರುಗಳಲ್ಲಿ 1,300 ರಿಂದ 2 ಸಾವಿರ ರೂಪಾಯಿವರೆಗೂ ವಸೂಲಿ ಮಾಡುತ್ತಿದ್ದಾರೆ.

ಏರ್​ಪೋರ್ಟ್​ನಿಂದ ಮೆಜೆಸ್ಟಿಕ್​, ಬನಶಂಕರಿಗೆ ಸಾವಿರಾರು ರೂಪಾಯಿ ಹಣ ಹೆಚ್ಚುವರಿಯಾಗಿ ಪಡೆಯಲಾಗುತ್ತಿದೆ. ಈ ಹಿಂದೆ 800 ರಿಂದ 1 ಸಾವಿರ ರೂ.ಗೆ ಟ್ಯಾಕ್ಸಿ ಚಾಲಕರು ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದರು. ಆದರೆ ಇಂದು ಮುಷ್ಕರದಿಂದಾಗಿ ದುಪ್ಪಟ್ಟು ಹಣವನ್ನು ಪ್ರಯಾಣಿಕರಿಂದ ಪೀಕುತ್ತಿದ್ದಾರೆ. ತುರ್ತಾಗಿ ತೆರಳಬೇಕಾದ ಕೆಲವರು ಹೆಚ್ಚು ಹಣ ನೀಡಿ ಪ್ರಯಾಣಿಸಿದ್ರೆ, ಇನ್ನು ಕೆಲವರು ಹಣ ಜಾಸ್ತಿಯಾಯ್ತು ಅಂತ ಬಸ್​ನಲ್ಲೇ ಸಂಚರಿಸುತ್ತಿದ್ದಾರೆ.

ಸರ್ಕಾರದಿಂದ ಹೆಚ್ಚುವರಿ ಬಸ್ ವ್ಯವಸ್ಥೆ:ಖಾಸಗಿ ಸಾರಿಗೆ ಚಾಲಕರು, ಮಾಲೀಕರ ಮುಷ್ಕರಕ್ಕೆ ರಾಜ್ಯ ಸರ್ಕಾರ ಸೆಡ್ಡು ಹೊಡೆದಿದೆ. ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಹೆಚ್ಚುವರಿ ಬಿಎಂಟಿಸಿ, ಕೆಎಸ್ಆರ್​ಟಿಸಿ ಬಸ್‌ಗಳನ್ನು ರಸ್ತೆಗಿಳಿಸಲಾಗಿದೆ. ಅಲ್ಲದೇ ಮೆಟ್ರೋ ರೈಲು ಸಹ ಹೆಚ್ಚುವರಿ ಓಡಾಟ ನಡೆಸುತ್ತಿದೆ. ಬಂದ್​ ನಡುವೆಯೂ ನಗರದ ಅನೇಕ ಕಡೆಗಳಲ್ಲಿ ಖಾಸಗಿ ವಾಹನಗಳ ಓಡಾಟ ಕಂಡುಬಂದಿದೆ. ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗದಂತೆ ಮೆಜೆಸ್ಟಿಕ್​ನಿಂದ ಏರ್ಪೋರ್ಟ್, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ನಗರದ ಎಲ್ಲಾ ಭಾಗಗಳಿಗೂ ಹೆಚ್ಚುವರಿ ಸರ್ಕಾರಿ ಬಸ್ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ:ಬೆಂಗಳೂರು: ಬಂದ್​ ನಡುವೆ ರಸ್ತೆಗಿಳಿದ ಕೆಲವು ಕ್ಯಾಬ್​, ರ‍್ಯಾಪಿಡೋ ಚಾಲಕರ ಮೇಲೆ ಹಲ್ಲೆ; ಮೊಟ್ಟೆ ಎಸೆದು ಆಕ್ರೋಶ

Last Updated : Sep 11, 2023, 2:14 PM IST

ABOUT THE AUTHOR

...view details