ಬೆಂಗಳೂರು:ಕಾವೇರಿ ವಿಚಾರಕ್ಕಾಗಿ ರಾಜ್ಯ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಕರೆ ನೀಡಿದ್ದ ಬೆಂಗಳೂರು ಬಂದ್ಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಪ್ರತಿಭಟನಾಕಾರರು ಬೆಳಗ್ಗೆ ಬೀದಿಗಿಳಿದು ಹೋರಾಟ ನಡೆಸಿದರು. ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಟೌನ್ ಹಾಲ್‌ನಿಂದ ಫ್ರೀಡಂ ಪಾರ್ಕ್ವರೆಗೂ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಗೆ ಪೊಲೀಸರು ತಡೆಯೊಡ್ಡಿದರು.
ತಮಿಳುನಾಡಿಗೆ ಕಾವೇರಿ ನೀರು ಹರಿಸಿದಿರುವುದನ್ನು ಖಂಡಿಸಿ ಸರ್ಕಾರ ವಿರುದ್ಧ ಧಿಕ್ಕಾರ ಕೂಗಿದರು. ಬೇಕೇ ಬೇಕು ನ್ಯಾಯಬೇಕು ಎಂದು ಆಗ್ರಹಿಸಿದರು. ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾದರು. ಈ ವೇಳೆ ಕೆಲಕಾಲ ಹೈಡ್ರಾಮ ನಡೆಯಿತು. ಅಂತಿಮವಾಗಿ ಬಿಎಂಟಿಸಿ ಬಸ್ಗಳಲ್ಲಿ ಮೂಲಕ ಪ್ರತಿಭಟನಾಕಾರರನ್ನು ಪೊಲೀಸರು ಕರೆದುಕೊಂಡು ಹೋದರು.
ಇದಕ್ಕೂ ಮುನ್ನ ಪ್ರತಿಭಟನಾಕಾರರೊಬ್ಬರು ಮಾತನಾಡಿ, ''ಕಾವೇರಿ ಹೋರಾಟ ನಿಲ್ಲೋದಿಲ್ಲ. ಸರ್ಕಾರ ಜನರ ಕಿವಿ ಮೇಲೆ ಹೂ ಇಡುತ್ತಿದೆ. ರಾಜ್ಯದಲ್ಲಿ ನಮಗೇ ನೀರಿಲ್ಲ. ಇಂಥ ಸಮಯದಲ್ಲಿ ತಮಿಳುನಾಡಿಗೆ ನೀರು ಬಿಟ್ಟಿರುವುದು ಸರಿಯಲ್ಲ. ಮೈಸೂರು ರಸ್ತೆಯ ಸ್ಯಾಟ್ ಲೈಟ್ ಬಸ್ ನಿಲ್ದಾಣದಿಂದ ಟೌನ್ ಹಾಲ್‌ವರೆಗೆ ಬಂದಿದ್ದೇವೆ. ಇಲ್ಲಿಂದ ಫ್ರೀಡಂ ಪಾರ್ಕ್ಗೆ ಹೋಗ್ತೀವಿ. ಅದಕ್ಕೆ ನಾವೂ ಹೂ ಇಟ್ಟುಕೊಂಡು ಪ್ರತಿಭಟನೆ ಮಾಡೋಕೆ ಬಂದಿದ್ದೇವೆ'' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಹುತೇಕ ಅಂಗಡಿಗಳು ಓಪನ್:ಬೆಂಗಳೂರು ಬಂದ್ ಬಿಸಿ ಜನಸಾಮಾನ್ಯರಿಗೆ ಅಷ್ಟಾಗಿ ತಟ್ಟಿಲ್ಲ. ಬಿಎಂಟಿಸಿ ಸೇರಿ ಖಾಸಗಿ ಸಾರಿಗೆ ಸೇವೆಯಲ್ಲಿ ವ್ಯತ್ಯಯವಾಗಿಲ್ಲ. ಎಂದಿನಂತೆ ಆಟೋ ಸಂಚಾರವಿದೆ. ಬಸ್ಗಳು ಕಾರ್ಯನಿರ್ವಹಿಸುತ್ತಿವೆ. ಓಲಾ-ಉಬರ್ ಸೇರಿ ಕ್ಯಾಬ್ ಆಧಾರಿತ ಸೇವೆಯಲ್ಲಿ ಯಾವುದೇ ತೊಡಕಾಗಿರುವುದು ಕಂಡುಬಂದಿಲ್ಲ. ಬಂದ್ ಬಗ್ಗೆ ಸಾರ್ವಜನಿಕರಲ್ಲಿ ಉಂಟಾದ ಗೊಂದಲದಿಂದ ಎಂದಿನಂತೆ ತಮ್ಮ ವ್ಯಾಪಾರ ವಹಿವಾಟು ಹಾಗೂ ದೈನಂದಿನ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಹಿಂದುಮುಂದು ನೋಡುತ್ತಿದ್ದಾರೆ. ಬಹುತೇಕ ಬಸ್ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಇಲ್ಲದಿರುವುದು ಕಂಡುಬಂತು. ಸಿಟಿ ಮಾರುಕಟ್ಟೆ ಕಾಂಪ್ಲೆಕ್ಸ್ನಲ್ಲಿ ಬಂದ್ ಬೋರ್ಡ್ ಅಳವಡಿಸಲಾಗಿದ್ದು, ಸಂಜೆ 6 ಗಂಟೆ ತನಕ ಅಂಗಡಿ ಮುಂಗಟ್ಟುಗಳು ಬಂದ್ ಎಂದು ನಮೂದಿಸಲಾಗಿದ್ದು, ಇದಕ್ಕೆ ಕೆ.ಆರ್.ಮಾರುಕಟ್ಟೆ ಸಂಘದಿಂದ ಬೆಂಬಲ ವ್ಯಕ್ತವಾಗಿದೆ.
ನಗರದಲ್ಲಿ ನಿಷೇಧಾಜ್ಞೆ ಜಾರಿ ಹಿನ್ನೆಲೆಯಲ್ಲಿ ಕೊನೆ ಕ್ಷಣದಲ್ಲಿ ಬಂದ್‌ನಿಂದ ಸಂಘಟನೆಗಳು ಹಿಂದೆ ಸರಿದಿವೆ. ಕೇವಲ ಪ್ರತಿಭಟನೆಗೆ ಬೆಂಗಳೂರು ಬಂದ್ ಸೀಮಿತವಾದಂತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬಸ್‌ಗಳನ್ನು ತಮಿಳುನಾಡು ಸಾರಿಗೆ ಸಂಸ್ಥೆ ಕರೆಯಿಸಿಕೊಂಡಿದೆ. ಹೀಗಾಗಿ ನಗರದತ್ತ ತಮಿಳುನಾಡು ಬಸ್ಗಳ ಸಂಚಾರದಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.