ಬೆಂಗಳೂರು : ಯುಎಸ್‌ಎ ಪ್ರಜೆಯೊಬ್ಬರು ತಮ್ಮ ಆಟೋದಲ್ಲಿ ಮರೆತು ಬಿಟ್ಟು ಹೋಗಿದ್ದ ಪರ್ಸ್ ಹಿಂದಿರುಗಿಸುವ ಮೂಲಕ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ. ಬೆಂಗಳೂರಿನ ಹನುಮಂತ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಯುಎಸ್ಎ ಮೂಲದ ಮಹಿಳೆ ಆಟೋ ರಿಕ್ಷಾದಲ್ಲಿ ಮರೆತು ಹೋದ ಅವರ ಯುಎಸ್ಎ ಪಾಸ್‌ಪೋರ್ಟ್, ವೀಸಾ, ಡಾಲರ್ಸ್ ಇದ್ದ ವ್ಯಾಲೆಟ್ ಅನ್ನು ಚಾಲಕ ಪೊಲೀಸ್ ಠಾಣೆಗೆ ಹಿಂದಿರುಗಿಸಿದ್ದಾರೆ. ಯುಎಸ್ಎ ಮೂಲದ ವೈದ್ಯೆ ಜ್ಯೋತಿ ಒಂದು ದಿನದ ಹಿಂದೆ ಕೆಲಸದ ನಿಮಿತ್ತ ಬೆಂಗಳೂರಿನಲ್ಲಿ ಓಡಾಡುವಾಗ ಗಾಂಧಿಬಜಾರ್ ಬಳಿ ಕಿಶೋರ್ ಎಂಬುವವರ ಆಟೋದಲ್ಲಿ ತಮ್ಮ ಪರ್ಸ್ ಮರೆತು ಹೋಗಿದ್ದರು.
ಅಗತ್ಯ ದಾಖಲಾತಿಗಳನ್ನು ಕಳೆದುಕೊಂಡ ಜ್ಯೋತಿ ಪುನಃ ಅವುಗಳನ್ನು ಸಿದ್ಧಪಡಿಸಿಕೊಳ್ಳಬೇಕಾದ ಅಗತ್ಯ ಎದುರಾಗಿತ್ತು. ಆದರೆ ಆಟೋದಲ್ಲಿ ಮರೆತುಹೋದ ವಸ್ತುಗಳನ್ನ ಗಮನಿಸಿದ ಚಾಲಕ ಕಿಶೋರ್ ತಕ್ಷಣ ಅವುಗಳನ್ನು ಹನುಮಂತ ನಗರ ಪೊಲೀಸ್ ಠಾಣೆಗೆ ತಂದೊಪ್ಪಿಸಿದ್ದಾರೆ. ಬಳಿಕ ವಾರಸುದಾರರಾದ ಜ್ಯೋತಿಯನ್ನು ಪತ್ತೆ ಹಚ್ಚಿದ ಹನುಮಂತ ನಗರ ಪೊಲೀಸರು ಅವುಗಳನ್ನು ಹಿಂದಿರುಗಿಸಿದರು. ತಮ್ಮ ವಸ್ತುಗಳನ್ನು ಪಡೆದ ಜ್ಯೋತಿ ಸಂತಸ ವ್ಯಕ್ತಪಡಿಸಿದ್ದಲ್ಲದೇ ಆಟೋ ಚಾಲಕ ಕಿಶೋರ್ಗೆ ಧನ್ಯವಾದ ಅರ್ಪಿಸಿದ್ದಾರೆ.
ವೈಯಕ್ತಿಕವಾಗಿ ಬಳಸಿಕೊಳ್ಳುವ ಅಥವಾ ಕಳೆದುಕೊಂಡವರೇ ಹುಡುಕಿಕೊಂಡು ಬರಲಿ ಎಂದು ನಿರ್ಲಕ್ಷ್ಯಿಸುವವರ ನಡುವೆ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ ಕಿಶೋರ್ಗೆ ದಕ್ಷಿಣ ವಿಭಾಗದ ಡಿಸಿಪಿ ಪಿ.ಕೃಷ್ಣಕಾಂತ್ ಸನ್ಮಾನಿಸಿದ್ದಾರೆ. ಆಟೋ ಚಾಲಕ ಸಹ ತಾನೂ ಮಾಡಿದ್ದ ಜವಾಬ್ದಾರಿಯುತ ಕೆಲಸಕ್ಕೆ ಸಂತಸಗೊಂಡಿದ್ದಾರೆ.