ಬೆಂಗಳೂರು: ಹಳೇ ದ್ವೇಷಕ್ಕೆ ವ್ಯಕ್ತಿವೋರ್ವ ತನ್ನ ಆಟೋ ಚಾಲಕ ಸ್ನೇಹಿತನೇ ಮಾರಕಾಸ್ತ್ರದಿಂದ ಇರಿದು ಹತ್ಯೆಗೈದಿರುವ ಘಟನೆ ಬೈಯಪ್ಪನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ಕೃತ್ಯ ನಡೆದ 15 ನಿಮಿಷದಲ್ಲೇ ಪೊಲೀಸರು ಆರೋಪಿಯನ್ನುಬೆನ್ನಟ್ಟಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸುದ್ದುಗುಂಟೆಪಾಳ್ಯ ನಿವಾಸಿ ಸಂತೋಷ್ ಮೃತ ಆಟೋ ಚಾಲಕ. ಕೃಷ್ಣಪ್ಪ ಗಾರ್ಡನ್ ನಿವಾಸಿ ಆನಂದ್ (26) ಬಂಧಿತನಾಗಿದ್ದು, ಆರೋಪಿಯನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆಟೋ ಚಾಲಕ ಸಂತೋಷ್ ವಿರುದ್ಧ ಮಹದೇವಪುರ ಠಾಣೆಯಲ್ಲಿ ರೌಡಿಪಟ್ಟಿ ಇದ್ದು, ಹಲವು ವರ್ಷಗಳಿಂದ ಆಟೋ ಚಾಲನೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಮೂರು ವರ್ಷಗಳ ಹಿಂದೆ ಸಂತೋಷ್ ಮದುವೆಯಾಗಿದ್ದು, ಸುದ್ದುಗುಂಟೆ ಪಾಳ್ಯದಲ್ಲಿ ದಂಪತಿ ವಾಸವಾಗಿದ್ದರು. ಆರೋಪಿ ಆನಂದ್ ಕೂಡ ಆಟೋ ಚಾಲಕನಾಗಿದ್ದು, ಸಂತೋಷ್ನ ಸ್ನೇಹಿತನಾಗಿದ್ದಾನೆ. ಕೆಲ ದಿನಗಳ ಹಿಂದೆ ಆಟೋ ಪಾರ್ಕಿಂಗ್ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿತ್ತು. ಆಗ ಸಂತೋಷ್, ಆನಂದ್ ಮೇಲೆ ಹಲ್ಲೆ ನಡೆಸಿದ್ದ. ಅದರಿಂದ ಆಕ್ರೋಶಗೊಂಡಿದ್ದ ಆನಂದ್ ಆತನ ವಿರುದ್ಧ ದ್ವೇಷ ಸಾಧಿಸುತ್ತಿದ್ದರು. ಶನಿವಾರ ಸಂಜೆ ಮದ್ಯ ಸೇವಿಸಿ ಸಂತೋಷ್ಗೆ ಕರೆ ಮಾಡಿದ ಆನಂದ್, ಮತ್ತೊಮ್ಮೆ ವಾಗ್ವಾದ ನಡೆಸಿದ್ದರು. ಅಲ್ಲದೆ, ಎಲ್ಲಿರುವೆ ಅಲ್ಲಿಗೆ ಬಂದು ಮಾತನಾಡುತ್ತೇನೆ ಎಂದು ಖಚಿತ ಪಡಿಸಿಕೊಂಡು, ಸಂಜೆ ಏಳು ಗಂಟೆ ಸುಮಾರಿಗೆ ಸಂತೋಷ್ ಮನೆಗೆ ನುಗ್ಗಿ ಚಾಕುವಿನಿಂದ ಇರಿದಿದ್ದಾನೆ.