ಬೆಂಗಳೂರು:ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ವ್ಯಾಪ್ತಿಯಿಂದ ಕಂದಾಯ ಇಲಾಖೆಯ ಸಹಾಯಕ ಆಯುಕ್ತರಿಗೆ ವರ್ಗಾವಣೆ ಮಾಡುವುದಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರದ ನಿರ್ಧಾರ ರಾಷ್ಟ್ರೀಯ ಹಿತಾಸಕ್ತಿಗಳಿಗೆ ವಿರುದ್ಧವಾಗಿದ್ದು, ತಕ್ಷಣ ನಿರ್ಧಾರ ಹಿಂಪಡೆದುಕೊಳ್ಳಬೇಕು ಎಂದು ಬೆಂಗಳೂರು ವಕೀಲರ ಸಂಘ ಕೇಂದ್ರ ಸರ್ಕಾರ ಆಗ್ರಹಿಸಿದೆ.
ನಗರದ ಪ್ರೆಸ್ ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಜನನ ಅಥವಾ ಮರಣವಾದ ಬಳಿಕ ಒಂದು ವರ್ಷದವರೆಗೂ ಪ್ರಮಾಣ ಪತ್ರವನ್ನು ಪಡೆದುಕೊಳ್ಳದವರು 1970 ರಿಂದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬೇಕಾಗಿತ್ತು. ಅಲ್ಲದೇ, ಈ ಸಂಬಂಧ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯ ಕೂಲಂಕಷವಾಗಿ ಪರಿಶೀಲಿಸಿ ಪ್ರಮಾಣ ಪತ್ರ ವಿತರಣೆಗೆ ಅವಕಾಶವಿತ್ತು. ಇದೀಗ ಈ ಪ್ರಕ್ರಿಯೆ ರದ್ದಾಗಲಿದ್ದು, ಅಧಿಕಾರಿಗಳು ಇಚ್ಚಿಸಿದಂತೆ ಜನನ- ಮರಣ ಪ್ರಮಾಣ ಪತ್ರ ವಿತರಣೆಯಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಜನನ ಮತ್ತು ಮರಣ ನೋಂದಣಿ ಕಾಯಿದೆಯ ಆಗಸ್ಟ್ 2023ರ ಇತ್ತೀಚಿನ ತಿದ್ದುಪಡಿ ಮಾಡಿರುವ ಕೇಂದ್ರದ ನಿರ್ಧಾರದಿಂದ ಸಹಾಯಕ ಆಯುಕ್ತರ ಕಚೇರಿಗಳಲ್ಲಿ ಭ್ರಷ್ಟಾಚಾರ ನಡೆಯುವ ಸಂಭವ ಇದೆ, ಕೂಡಲೇ ಅಧಿಕಾರವನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ವಹಿಸಬೇಕು. ಇಲ್ಲವಾದಲ್ಲಿ ದೇಶದಲ್ಲಿ ನೆಲೆಸಿರುವ ಅಕ್ರಮ ವಾಸಿಗಳೂ ಭಾರತದಲ್ಲಿಯೇ ನೆಲೆಸಿದ್ದೇವೆ ಎಂಬುದಾಗಿ ಅಧಿಕಾರಿಗಳಿಂದ ಪ್ರಮಾಣ ಪತ್ರ ಪಡೆಯುವ ಸಾಧ್ಯತೆ ಇದೆ ಎಂದು ಅವರು ವಿವರಿಸಿದರು.
ಇದೇ ವೇಳೆ ರಾಜ್ಯದ ಎಲ್ಲ ತಾಲೂಕುಗಳ ಕೋರ್ಟ್ ಆವರಣಗಳಲ್ಲಿ ಶೌಚಾಲಯಗಳು ಸೇರಿದಂತೆ ಮುಖ್ಯ ಮೂಲ ಸೌಲಭ್ಯಗಳನ್ನು ಸರ್ಕಾರ ಸರಿಪಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿದರು. ಜೊತೆಗೆ, ನ್ಯಾಯಾಲಯಗಳಲ್ಲಿ ಪ್ರಕರಣಗಳ ಇತ್ಯರ್ಥ ಪ್ರಕ್ರಿಯೆ ವಿಳಂಬ ಆಗುತ್ತಿರುವುದನ್ನು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ಸರಿಪಡಿಸಿ ನ್ಯಾಯ ಅರಸಿ ಕೋರ್ಟ್ ಮೆಟ್ಟಿಲೇರುವ ಜನರ ನೆರವಿಗೆ ಧಾವಿಸಬೇಕು ಎಂದು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಲಿಂಗೇಗೌಡ, ಸುರೇಶ್ ರೆಡ್ಡಿ, ಪ್ರಭು ಕುಮಾರ್ ಮುಂತಾದ ವಕೀಲರು ಉಪಸ್ಥಿತರಿದ್ದರು.
ಇದನ್ನೂ ಓದಿ:ಮಳೆ ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿಯ ಮರಣ ಪ್ರಮಾಣ ಪತ್ರ ವಿತರಿಸಲು ಹೈಕೋರ್ಟ್ ಸೂಚನೆ