ಬೆಂಗಳೂರು:ಕಳೆದ ತಿಂಗಳು ನಗರದಲ್ಲಿ ಯುವತಿ ಮೇಲೆ ಆ್ಯಸಿಡ್ ಎರಚಿ ವಿಕೃತಿ ಮೆರೆದಿದ್ದ ಆರೋಪಿ ನಾಗೇಶ್ ಕೊನೆಗೂ ಖಾಕಿ ಬಲೆಗೆ ಬಿದ್ದಿದ್ದಾನೆ. ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಸ್ವಾಮೀಜಿಯ ವೇಷದಲ್ಲಿ ಆರೋಪಿ ನಾಗ ಸಿಕ್ಕಿಬಿದ್ದಿದ್ದಾನೆ.
ಕೃತ್ಯ ಎಸಗಿದಾಗಿನಿಂದ ತಲೆಮರೆಸಿಕೊಂಡಿದ್ದ ಆರೋಪಿ ನಾಗೇಶ್ ಖಾವಿ ಧರಿಸಿ ಧ್ಯಾನ ಮಾಡುತ್ತಿದ್ದ. 16 ದಿನಗಳ ಬಳಿಕ ನಿರಂತರ ಶೋಧದ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ. ಎಲ್ಲ ಕಸರತ್ತು ನಡೆಸಿದ್ದ ಬೆಂಗಳೂರು ಪೊಲೀಸರು ಈಗಾಗಲೇ ಆತನ ಫೋಟೋಗಳನ್ನ ಇತರ ಎಲ್ಲ ರಾಜ್ಯಗಳ ಪೊಲೀಸರಿಗೆ ಕಳುಹಿಸಿದ್ದರು.
ಧ್ಯಾನದ ವೇಳೆ ತಮಿಳುನಾಡಿನ ತಿರುವಣ್ಣಾಮಲೈ ನಲ್ಲಿ ಆರೋಪಿ ಸಿಕ್ಕಿಬಿದ್ದಿದ್ದು, ಕಾಮಾಕ್ಷಿ ಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಯೊಂದಿಗೆ ಪೊಲೀಸರು ನಗರದತ್ತ ಬರುತ್ತಿದ್ದು, ರಾತ್ರಿ 11 ಗಂಟೆ ವೇಳೆಗೆ ಬೆಂಗಳೂರು ತಲುಪಲಿದ್ದಾರೆ. ಆರೋಪಿಯನ್ನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಕರೆದುಕೊಂಡು ಬರಲಿದ್ದಾರೆ.
ಖಾವಿ ಧರಿಸಿದ್ದ ಖದೀಮ:ಘಟನೆಯ ಬಳಿಕ ಆರೋಪಿ ತಿರುವಣ್ಣಾಮಲೈ ನ ದೇವಸ್ಥಾನದಲ್ಲಿ ಅನುಮಾನ ಬರಬಾರದೆಂದು ಖಾವಿ ಧರಿಸಿ ಕುಳಿತಿದ್ದ. ಆರೋಪಿಯನ್ನ ಪತ್ತೆ ಮಾಡಿದ ಬಳಿಕ ಪೊಲೀಸರಿಗೂ ಕೆಲಕಾಲ ಗೊಂದಲ ಉಂಟಾಗಿತ್ತು. ಖಾವಿಧಾರಿ ನಾಗೇಶ್ ನೋಡಿ ಖಾಕಿತಂಡಕ್ಕೆ ಅನುಮಾನ ಮೂಡಿತ್ತು. ಬಳಿಕ ನಾಗೇಶ್ ಗುರುತು ಪತ್ತೆ ಮಾಡಿ ಬಂಧಿಸಲಾಗಿದೆ.
ಇದನ್ನೂ ಓದಿ: ಆ್ಯಸಿಡ್ ದಾಳಿಗೊಳಗಾದ ಯುವತಿಗೆ ಪ್ಲಾಸ್ಟಿಕ್ ಸರ್ಜರಿ.. 20 ದಿನದ ಹಿಂದೆನೇ ದಾಳಿಗೆ ಕೀಚಕನ ಸಂಚು!
ಪ್ರೀತಿ ನಿರಾಕರಿಸಿದ್ದಕ್ಕೆ ಕೃತ್ಯ:ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ನಾಗೇಶ್ ಸಂತ್ರಸ್ತ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ಆಕೆ ಪ್ರೀತಿ ನಿರಾಕರಿಸಿದ್ದಳು. ಇದರಿಂದ ಕೋಪಗೊಂಡು ದಾಳಿಗೆ ಸಂಚು ರೂಪಿಸಿದ್ದು, ಕಳೆದ ಏಪ್ರಿಲ್ 28ರಂದು ಬೆಳಗ್ಗೆ ಸುಂಕದಕಟ್ಟೆಯ ಮುತ್ತೂಟ್ ಮಿನಿ ಫೈನಾನ್ಸ್ ಕಚೇರಿ ಬಳಿ ಯುವತಿಗೆ ಆ್ಯಸಿಡ್ ಎರಚಿ ಪರಾರಿಯಾಗಿದ್ದ. ಘಟನೆಯಲ್ಲಿ ಯುವತಿ ಗಂಭೀರವಾಗಿ ಗಾಯಗೊಂಡಿದ್ದಳಲ್ಲದೆ, ನಾಗೇಶ್ ಕೈಗೂ ಗಾಯವಾಗಿತ್ತು.
ವಿಶೇಷ ತಂಡ ರಚಿಸಿ ಶೋಧ:ತಕ್ಷಣ ಆರೋಪಿ ನಾಗೇಶ್ ವಕೀಲರನ್ನ ಸಂಪರ್ಕಿಸಿದ್ದು, ಯಾರೂ ಕೂಡ ಪ್ರಕರಣ ತೆಗೆದುಕೊಂಡಿರಲಿಲ್ಲ. ಹೀಗಾಗಿ ಆರೋಪಿಯು ಬಂಧನ ಭೀತಿಯಿಂದ ತಮಿಳುನಾಡಿಗೆ ಪರಾರಿಯಾಗಿದ್ದ. ಇತ್ತ ಕಾಮಾಕ್ಷಿಪಾಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ವಿಶೇಷ ತಂಡ ರಚಿಸಿ ಶೋಧಕ್ಕಿಳಿದರೂ, ಇದುವರೆಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಈತನ ಪತ್ತೆಗಾಗಿ ಕನ್ನಡ, ತೆಲುಗು, ತಮಿಳು ಭಾಷೆಯಲ್ಲಿ ಕರಪತ್ರ ಪ್ರಕಟಿಸಿ ಆಂಧ್ರಪ್ರದೇಶ, ತಮಿಳುನಾಡಿನ ದೇವಸ್ಥಾನ, ಮಠಗಳಲ್ಲಿ ಹಂಚಿದ್ದರು. ಅಲ್ಲದೇ ಎಲ್ಲ ಪೊಲೀಸ್ ಠಾಣೆಗಳಿಗೆ ಲುಕ್ ಔಟ್ ನೋಟಿಸ್ ಹೊರಡಿಸಲಾಗಿತ್ತು.
ಇದನ್ನೂ ಓದಿ: ಆ್ಯಸಿಡ್ ನಾಗ ಯಾವುದೇ ಸಾಕ್ಷಿ ಬಿಡದೆ ಪರಾರಿಯಾಗಿದ್ದಾನೆ : ಕಮಿಷನರ್ ಕಮಲ್ ಪಂತ್