ಬೆಂಗಳೂರು: ಇತ್ತೀಚೆಗೆ ಫ್ಯಾಟ್ ಸರ್ಜರಿ ಮಾಡಿಸಲು ಹೋಗಿ ನಟಿ ಚೇತನ ರಾಜ್ ಸಾವನ್ನಪ್ಪಿರುವ ಪ್ರಕರಣ ಮಾಸುವ ಮುನ್ನವೇ ಇನ್ನೊಂದು ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ. ಫ್ಯಾಟ್ ಕರಗಿಸುವ ಸರ್ಜರಿಗೆ ಒಳಗಾದ ಯುವತಿಯು ಸೈಡ್ ಎಫೆಕ್ಟ್ನಿಂದಾಗಿ ಕಣ್ಣೀರು ಸುರಿಸುವಂತಾಗಿದೆ. ಖಾಸಗಿ ಕಂಪನಿಯಲ್ಲಿ ಹೆಚ್.ಆರ್ ಆಗಿ ಕೆಲಸ ಮಾಡುತ್ತಿರುವ ಯುವತಿ ಇಂತಹ ಫ್ಯಾಟ್ ಕರಗಿಸುವ ಸರ್ಜರಿ ನಂತರ ಸಮಸ್ಯೆಯಿಂದ ನರಳುವಂತೆ ಆಗಿದೆ. ದೆಹಲಿ ಮೂಲದ ಈ ಯುವತಿ ಎಂ.ಎಸ್.ಪಾಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಸರ್ಜರಿಗೆ ಒಳಗಾಗಿದ್ದರು.
ಆದರೆ, ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಹತ್ತೇ ದಿನಕ್ಕೆ ಅಡ್ಡ ಪರಿಣಾಮ ಕಾಣಿಸಿಕೊಂಡಿದೆ. ಇದರಿಂದ ಸೊಂಟದ ಭಾಗದಲ್ಲಿ ಕೀವು ತುಂಬಿ, ಕಪ್ಪಾಗಿ ಗಾಯಗಳಾಗಿವೆ. ಅತಿಯಾದ ನೋವಿನಿಂದ ಬಳಲುತ್ತಿರುವುದಾಗಿ ಯುವತಿ ವಿಡಿಯೋ ಮೂಲಕ ತಮ್ಮ ಅಳಲು ತೋಡಿಕೊಂಡಿದ್ದಾಳೆ.