ಬೆಂಗಳೂರು: ಅಭಿವೃದ್ಧಿ ಹೆಸರಲ್ಲಿ ಉದ್ಯಾನ ನಗರಿಯಲ್ಲಿ ಮರಗಳ ಮಾರಣಹೋಮ ನಡೆಯುತ್ತಿದೆ. 2ನೇ ಹಂತದ ನಮ್ಮ ಮೆಟ್ರೋ ಮಾರ್ಗ ನಿರ್ಮಾಣಕ್ಕಾಗಿ ಹೊರವರ್ತುಲ ರಸ್ತೆಯಲ್ಲಿ 833 ಮರಗಳನ್ನು ಕಡಿಯಲು ಬಿಬಿಎಂಪಿ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ ಅನುಮತಿ ನೀಡಿದೆ.
ಸೆಂಟ್ರಲ್ ಸಿಲ್ಕ್ ಬೋರ್ಡ್ನಿಂದ ಕಾಡುಬೀಸನಹಳ್ಳಿಯವರಿಗೆ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಈ ಮರಗಳು ಅಡ್ಡಿಯಾಗಿದ್ದು, ರಸ್ತೆ ಮಧ್ಯಭಾಗದಲ್ಲೇ ಇರುವುದರಿಂದ ಕಡಿಯುವುದು ಅನಿವಾರ್ಯವಾಗಿದೆ. ಈ ಬಗ್ಗೆ ಸಾರ್ವಜನಿಜರಿಗೆ ಆಕ್ಷೇಪಣೆ ಸಲ್ಲಿಸುವ ಅವಕಾಶವಿದ್ದು, ಜು.4ರೊಳಗೆ ಆಕ್ಷೇಪಣೆ ಸಲ್ಲಿಸಬೇಕು ಎಂದು ಪಾಲಿಕೆ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹೆಚ್.ಎಸ್.ರಂಗನಾಥ ಸ್ವಾಮಿ ತಿಳಿಸಿದರು.
ಈ ಮರಗಳೇನು ಅಷ್ಟು ದೊಡ್ಡವಲ್ಲ. ಸ್ಥಳಾಂತರಿಸಲು ಕೂಡಾ ಬೇರುಗಳು ಅಷ್ಟು ಆಳವಾಗಿಲ್ಲ. ಮರಗಳನ್ನು ಕಡಿಯಲೇಬೇಕಾಗಿದ್ದು, ನಿಗಮವು ಒಂದು ಮರಕ್ಕೆ 10 ಸಸಿ ನೆಟ್ಟು ಪೋಷಿಸಬೇಕೆಂದು ನ್ಯಾಯಾಲಯ ಹೇಳಿದೆ ಎಂದು ಅವರು ತಿಳಿಸಿದರು.