ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘಿಸಿ ದಂಡ ಕಟ್ಟದೆ ಬಾಕಿ ಉಳಿಸಿಕೊಂಡಿರುವ ಮತ್ತು ಪ್ರಕರಣ ಕೋರ್ಟ್ನಲ್ಲಿ ಇರುವವರಿಗೆ ಫೆಬ್ರವರಿ 11ರೊಳಗೆ ದಂಡ ಪಾವತಿಸಿದರೆ ಶೇಕಡಾ 50ರಷ್ಟು ರಿಯಾಯಿತಿ ಘೋಷಿಸುತ್ತಿದ್ದಂತೆ ದಂಡ ಪಾವತಿಸುವವರ ಸಂಖ್ಯೆಯಲ್ಲಿ ಭಾರಿ ಪ್ರಮಾಣದ ಏರಿಕೆಯಾಗಿದೆ. ಫೆಬ್ರವರಿ 11ರಂದು ಲೋಕ ಅದಾಲತ್ ನಡೆಯಲಿರುವ ಹಿನ್ನೆಲೆಯಲ್ಲಿ ದಂಡ ಪಾವತಿಯಲ್ಲಿ ರಿಯಾಯಿತಿ ನೀಡಲು ಹೈಕೋರ್ಟ್ ಹಿರಿಯ ನ್ಯಾಯಮೂರ್ತಿಗಳು ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ಬಿ.ವೀರಪ್ಪ ಅವರ ಅಧ್ಯಕ್ಷತೆಯಲ್ಲಿ ಜನವರಿ 27ರಂದು ನಡೆದ ಸಭೆಯಲ್ಲಿ ತೆಗೆದುಗೊಂಡ ನಿರ್ಣಯದಂತೆ ಸಾರಿಗೆ ಇಲಾಖೆ ಈ ಕ್ರಮ ಕೈಗೊಂಡಿತ್ತು.
ಟ್ರಾಫಿಕ್ ದಂಡ ಪಾವತಿಸಲು ಶೇ 50 ರಿಯಾಯಿತಿ ಘೋಷಿಸುತ್ತಿದ್ದಂತೆ ಇಂದು ಒಂದೇ ದಿನ (ರಾತ್ರಿ 9 ಗಂಟೆಯವರೆಗೆ) 1 ಕೋಟಿ 42 ಲಕ್ಷದ 859 ಸಾವಿರ ಕ್ಕೂ ಅಧಿಕ ಪ್ರಕರಣಗಳ ಪೈಕಿ 201828 ಪ್ರಕರಣಗಳ ಒಟ್ಟು 5ಕೋಟಿ 61ಲಕ್ಷದ 45 ಸಾವಿರ ರೂಪಾಯಿ ದಂಡ ಪಾವತಿಯಾಗಿದೆ. ಪೊಲೀಸ್ ಠಾಣೆಗಳಲ್ಲಿ 2 ಕೋಟಿ 17 ಲಕ್ಷ 24 ಸಾವಿರದ 950 ರೂಪಾಯಿ ದಂಡ ಪಾವತಿಯಾಗಿದ್ದು, ಸಂಚಾರಿ ಆಯುಕ್ತರ ಕಚೇರಿಯಲ್ಲಿ 89,650 ಬೆಂಗಳೂರು ಒನ್ ಸೆಂಟರಿನಲ್ಲಿ 16,21,600 ಪಾವತಿಯಾಗಿದ್ದು, ಪೇಟಿಎಂ ಮೂಲಕ 3 ಕೋಟಿ 23 ಲಕ್ಷ 68 ಸಾವಿರದ 900 ರೂ ದಂಡ ಪಾವತಿಯಾಗಿದೆ ಎಂದು ಬೆಂಗಳೂರು ಸಂಚಾರಿ ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.