ಬೆಂಗಳೂರು: ಡಿ.ಜಿ ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಗಲಭೆ ಪೂರ್ವ ನಿಯೋಜಿತ ಸಂಚು ಎಂದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಉದ್ದೇಶಪೂರ್ವಕವಾಗಿ ನಡೆಸಿದ ಕೃತ್ಯದಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ ) ಪಕ್ಷದ ಪಾತ್ರವಿದೆ ಎಂಬುದು ಮೇಲ್ನೊಟಕ್ಕೆ ಸಾಬೀತಾಗಿದೆ.
ಇದಕ್ಕೆ ಪೂರಕವಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದು, ಈ ಸಂಘಟನೆ ನಿಷೇಧಿಸುವ ಸಂಬಂಧ ಪ್ರಕ್ರಿಯೆ ಆರಂಭಿಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗುವುದು ಎಂದು ಈಗಾಗಲೇ ತಿಳಿಸಿದ್ದಾರೆ. ಇದೀಗ ಬೆಂಗಳೂರು ಗಲಭೆ ಸಂಬಂಧಿಸಿದಂತೆ ಎಸ್ಡಿಆರ್ಎಫ್ ಪಕ್ಷದ ಮುಖಂಡ ಮೊಹಮ್ಮದ್ ಮುಜಾಮಿಲ್ ಸೇರಿದಂತೆ ಮೂವರನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ಗಲಭೆಗೆ ಕುಮ್ಮಕ್ಕು ಆರೋಪ: ಎಸ್ಡಿಪಿಐ ಮುಖಂಡ ಅರೆಸ್ಟ್!
ವಿವಿಧ ನಾಯಕರ ಆಗ್ರಹ!
ಇನ್ನೊಂದೆಡೆ ಸಂಸದೆ ಶೋಬಾ ಕರಂದ್ಲಾಜೆ, ಕೇಂದ್ರ ಸಚಿವ ಸದಾನಂದಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ವಿಶ್ವನಾಥ್ ಸೇರಿದಂತೆ ಇನ್ನಿತರ ಬಿಜೆಪಿ ನಾಯಕರು ರಾಜ್ಯದಲ್ಲಿ ಎಸ್ಡಿಆರ್ಎಫ್ ನಿಷೇಧಿಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎಸ್ಡಿಪಿಐ ಬ್ಯಾನ್ಗೆ ಈ ಹಿಂದಿನಿಂದಲೂ ಆಗ್ರಹ
ಈ ಮೂಲಕ ರಾಜ್ಯದಲ್ಲಿ ಎಸ್ಡಿಪಿಐ ಬ್ಯಾನ್ ಮಾಡಬೇಕೆಂಬ ಕೂಗು ಮತ್ತೆ ಮೊಳಕೆಯೊಡದಿದೆ. ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷವನ್ನು ನಿಷೇಧ ಮಾಡುವ ಕೂಗು ಈ ಹಿಂದಿನಿಂದಲೂ ಕೇಳಿ ಬರುತ್ತಿದೆ. ಹಿಂದೂ ಕಾರ್ಯಕರ್ತರ ಮೇಲಿನ ದಾಳಿ, ಕೋಮು ಗಲಭೆ ನಡೆದಂತಹ ಸಂದರ್ಭದಲ್ಲಿ ಎಸ್ಡಿಆರ್ಎಫ್ ಪಕ್ಷದ ಕೈವಾಡವಿರುವ ಆರೋಪ ಕೇಳಿ ಬಂದಿದ್ದವು. ಕಳೆದ ವರ್ಷ ಡಿಸೆಂಬರ್ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಹಲವೆಡೆ ದುಷ್ಕರ್ಮಿಗಳು ಕಲ್ಲು ಎಸೆದು ಗಲಭೆ ಎಬ್ಬಿಸಿದ್ದರು. ಪರಿಸ್ಥಿತಿ ನಿಯಂತ್ರಣಕ್ಕಾಗಿ ಇಬ್ಬರ ಮೇಲೆ ಮಂಗಳೂರು ಪೊಲೀಸರು ಗೋಲಿಬಾರ್ ಮಾಡಿದ್ದರು. ಹಿಂಸಾಚಾರ ಹಿಂದೆ ಎಸ್ ಡಿಪಿಐ ಕಾರ್ಯಕರ್ತರ ಕೈವಾಡವಿದೆ ಎಂಬ ಆರೋಪ ಕೇಳಿ ಬಂದಿತ್ತು.