ಬೆಂಗಳೂರು: ಬೆಳಗಾವಿ ಲೋಕಸಭೆ ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ಮಾಡುವ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಜಿಲ್ಲೆಯ ನಾಯಕರ ಜೊತೆ ಸಮಾಲೋಚನೆ ನಡೆಸಿದರು.
ಕೇಂದ್ರ ಸಚಿವ ಮತ್ತು ಬೆಳಗಾವಿ ಸಂಸದ ಸುರೇಶ್ ಅಂಗಡಿ ನಿಧನದಿಂದ ತೆರವಾಗಿರುವ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಬೇಕಿದ್ದು, ಶೀಘ್ರದಲ್ಲೇ ಚುನಾವಣಾ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪಕ್ಷದಿಂದ ಅಭ್ಯರ್ಥಿ ಘೋಷಣೆ ಸಂಬಂಧ ಸುದೀರ್ಘ ಚರ್ಚೆ ನಡೆದಿದ್ದು, ಸಮರ್ಥ ಹಾಗೂ ಗೆಲ್ಲುವ ಅಭ್ಯರ್ಥಿ ಕಣಕ್ಕಿಳಿಸುವ ಸಂಬಂಧ ಚರ್ಚಿಸಲಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ನೂರಕ್ಕೆ ನೂರರಷ್ಟು ಗೋಹತ್ಯೆ ತಡೆ ವಿಧೇಯಕ ಜಾರಿಗೆ ತರುತ್ತೇವೆ: ಸಚಿವ ಆರ್.ಅಶೋಕ್
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡುವ ನಿರೀಕ್ಷೆ ಇದೆ ಎನ್ನಲಾಗಿದ್ದು, ಇಂದು ಅವರು ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ಇದಕ್ಕೆ ಪುಷ್ಠಿ ಕೊಟ್ಟರು. ಸಭೆಯಲ್ಲಿ ಅಂತಿಮವಾಗಿ ಅಭ್ಯರ್ಥಿ ಆಯ್ಕೆ ಮಾಡಿರುವ ಸಂಬಂಧ ಮಾಹಿತಿ ಇಲ್ಲ. ಜೊತೆಗೆ ಪಕ್ಷದ ನಾಯಕರಿಂದಲೇ ಕೇಳಿ ಬರುತ್ತಿರುವ ಅಪಸ್ವರದ ಬಗೆಗೂ ಸಭೆಯಲ್ಲಿ ಚರ್ಚೆ ನಡೆಯಿತು.
ಸಭೆಯಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ, ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್, ಉಪ ಚುನಾವಣೆಯ ಉಸ್ತುವಾರಿ ವಹಿಸಿರುವ ಎಂ.ಬಿ.ಪಾಟೀಲ್, ಶಾಸಕರಾದ ಲಕ್ಷ್ಮೀ ಹೆಬ್ಬಾಳಕರ್, ಮಹಾಂತೇಶ ಕೌಜಲಗಿ ಹಾಜರಿದ್ದರು.