ಕರ್ನಾಟಕ

karnataka

ETV Bharat / state

ಕೊರೊನಾ ಭೀತಿ ಮಧ್ಯೆ ಆರ್ಥಿಕ ಸಂಕಷ್ಟ: ಈ ಬಾರಿಯೂ ಬೆಳಗಾವಿ ಅಧಿವೇಶನ ಇರೋದಿಲ್ಲ!? - Bangalore Session

ಒಂದೆಡೆ ಕೊರೊನಾ ರಾಜ್ಯದಲ್ಲಿ ತಾಂಡವವಾಡುತ್ತಿದ್ದರೆ. ಇತ್ತ ಆರ್ಥಿಕ ಪರಿಸ್ಥಿತಿ ಸಹ ಸವಾಲಾಗಿ ಸರ್ಕಾರಕ್ಕೆ ಕಾಡುತ್ತಿದೆ. ಈ ಹಿನ್ನೆಲೆ ಈ ಬಾರಿ ಕೂಡ ಬೆಳಗಾವಿಯ ಚಳಿಗಾಲದ ಅಧಿವೇಶನ ನಡೆಯುವುದು ಅನುಮಾನ ಎನ್ನಲಾಗುತ್ತಿದೆ.

Belagavi winter session unlikely to held on this year..cause of corona panic
ಬೆಳಗಾವಿ ಅಧಿವೇಶನಕ್ಕೂ ತಟ್ಟಿದ ಕೊರೊನಾ ಭೀತಿ: ಚಳಿಗಾಲದ ಅಧಿವೇಶನಕ್ಕೆ ಬ್ರೇಕ್​​​..?

By

Published : Aug 4, 2020, 8:21 PM IST

Updated : Aug 5, 2020, 10:07 PM IST

ಬೆಂಗಳೂರು:ಈ ಬಾರಿಯೂ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುವುದು ಬಹುತೇಕ ಅನುಮಾನವಾಗಿದೆ. ಕೊರೊನಾದ ಭೀತಿ ಬೆಳಗಾವಿ ಅಧಿವೇಶನಕ್ಕೆ ಭಾಗಶಃ ಎಳ್ಳುನೀರು ಬಿಟ್ಟಿದೆ.

ಕೊರೊನಾ ಸೃಷ್ಟಿಸಿದ ಭಯ ಹಾಗೂ ಆರ್ಥಿಕ ಸಂಕಷ್ಟ ರಾಜ್ಯದ ಆಡಳಿತ ಯಂತ್ರದ ಮೇಲೆಯೂ ಪರಿಣಾಮ ಬೀರುತ್ತಿದೆ. ಬಹುತೇಕ ಆಡಳಿತ ವರ್ಗ ಕೊರೊನಾ ನಿಯಂತ್ರಣದ‌ತ್ತ ಗಮನ ಹರಿಸಿದೆ. ಅಲ್ಲದೆ ಸಾಮಾಜಿಕ ಅಂತರ ಕಾಪಾಡಿಕೊಂಡು ಅಧಿವೇಶನ ನಡೆಸುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ.

ಹಲವು ಸುಗ್ರೀವಾಜ್ಞೆಗಳಿಗೆ ಅನುಮೋದನೆ ನೀಡುವ ಸಲುವಾಗಿ ಮಳೆಗಾಲದ ಅಧಿವೇಶನ ನಡೆಸುವ ಅನಿವಾರ್ಯತೆ ಸರ್ಕಾರದ್ದಾಗಿದೆ. ಅದಕ್ಕಾಗಿ ಜುಲೈನಲ್ಲಿ ನಡೆಯಬೇಕಾಗಿದ್ದ ಮಳೆಗಾಲದ ಅಧಿವೇಶನವನ್ನು ಸೆಪ್ಟೆಂಬರ್​​ನಲ್ಲಿ ನಡೆಸಲು ಯೋಚಿಸಲಾಗಿದೆ.

ಸಾಮಾನ್ಯವಾಗಿ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿ ಅಕ್ಟೋಬರ್ ಅಥವಾ ನವಂಬರ್​ನಲ್ಲಿ ನಡೆಸಲಾಗುತ್ತದೆ. ಕಳೆದ ವರ್ಷ ಅತಿವೃಷ್ಟಿ ಹಿನ್ನೆಲೆ ಚಳಿಗಾಲದ ಅಧಿವೇಶನವನ್ನು ಬೆಂಗಳೂರಿನಲ್ಲೇ ಮಾಡಲಾಗಿತ್ತು. ಕೊರೊನಾ ಭೀತಿ ಹಿನ್ನೆಲೆ ಈ ಬಾರಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸುವುದೇ ಅನುಮಾನವಾಗಿದೆ.

ಬೆಳಗಾವಿ ಅಧಿವೇಶನ ಅನುಮಾನ: ಸೆಪ್ಟೆಂಬರ್​​ನಲ್ಲಿ ಬೆಂಗಳೂರಲ್ಲಿ ಮಳೆಗಾಲದ ಅಧಿವೇಶನ ನಡೆಸಲು ಯೋಚಿಸಿರುವ ಕಾರಣ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸುವ ಬಗ್ಗೆ ಸರ್ಕಾರ ಒಲವು ಹೊಂದಿಲ್ಲ. ಕೊರೊನಾ ಭೀತಿ ಜೊತೆಗೆ ಆರ್ಥಿಕ ಸಂಕಷ್ಟದ ನಡುವೆ ಬೆಳಗಾವಿಯಲ್ಲಿ ಅಧಿವೇಶನ ನಡೆಸುವುದು ದುಬಾರಿಯಾಗಲಿದೆ ಎಂಬುದು ವಿಧಾನಸಭೆ ಸಚಿವಾಲಯ ಅಧಿಕಾರಿಗಳ ಅಭಿಪ್ರಾಯ. ಹೀಗಾಗಿ ಈ ಬಾರಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸುವುದು ಬೇಡ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ.

ಮಳೆಗಾಲದ ಅಧಿವೇಶನವನ್ನು ಸೆಪ್ಟೆಂಬರ್​ನಲ್ಲಿ ವಿಳಂಬವಾಗಿ ನಡೆಸಲು ಉದ್ದೇಶಿಸಲಾಗಿದೆ. ಸೆಪ್ಟೆಂಬರ್​ನಲ್ಲಿ ಅಧಿವೇಶನ ನಡೆಸುವುದರಿಂದ ಚಳಿಗಾಲದ ಅಧಿವೇಶನ ನಡೆಸುವ ಬಗ್ಗೆಯೂ ಅನುಮಾನ ಮೂಡಿದೆ. ಒಂದು ವೇಳೆ ನಡೆಸಿದ್ರೂ ಅಲ್ಪಾವಧಿಯ ಅಧಿವೇಶನ ಬೆಂಗಳೂರಿನಲ್ಲೇ ನಡೆಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರ್ಥಿಕ ಹೊರೆ ಹಾಗೂ ಕೊರೊನಾ ಭೀತಿ: ಬೆಳಗಾವಿಯಲ್ಲಿ 2018ಕ್ಕೆ ನಡೆದ 10 ದಿನಗಳ ಅಧಿವೇಶನಕ್ಕಾಗಿ ಸರ್ಕಾರ ಸುಮಾರು 13.85 ಕೋಟಿ ರೂ. ಖರ್ಚು ಮಾಡಿದೆ. ಈ ಬಾರಿ ಆರ್ಥಿಕ ಸಂಕಷ್ಟ ವಿಪರೀತವಾಗಿದ್ದು, ಬೆಳಗಾವಿಯಲ್ಲಿ ಕೋಟ್ಯಾಂತರ ರೂ. ಹಣ ಖರ್ಚು ಮಾಡಿ ಅಧಿವೇಶನ ನಡೆಸುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಅದೇ ಬೆಂಗಳೂರಿನಲ್ಲಿ 10 ದಿನಗಳ ಕಾಲ ಅಧಿವೇಶನ ನಡೆಸಲು ಸುಮಾರು 60 ಲಕ್ಷ ರೂ. ಮಾತ್ರ ತಗುಲುತ್ತದೆ.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನದಲ್ಲಿ ಪಾಲ್ಗೊಂಡ ಶಾಸಕರು, ಅಧಿಕಾರಿಗಳ ವಾಸ್ತವ್ಯಕ್ಕೆ ಸರ್ಕಾರ ಸುಮಾರು 4.42 ಕೋಟಿ ರೂ. ಖರ್ಚು ಮಾಡಿತ್ತು. ಸದ್ಯದ ಆರ್ಥಿಕ ಸ್ಥಿತಿಗತಿಯಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಲು ಆರ್ಥಿಕ ಇಲಾಖೆಯೂ ಒಲವು ತೋರುತ್ತಿಲ್ಲ. ಅಲ್ಲದೆ ಕೊರೊನಾ ಭೀತಿಯೂ ಹೆಚ್ಚಾಗುತ್ತಿದ್ದು, ಬೆಳಗಾವಿಯಲ್ಲಿ ಅಧಿವೇಶನ ನಡೆಸದಿರುವ ಬಗ್ಗೆ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Last Updated : Aug 5, 2020, 10:07 PM IST

ABOUT THE AUTHOR

...view details