ಬೆಳಗಾವಿ:ಮಹಾನಗರ ಪಾಲಿಕೆಯ ಸಾರ್ವತ್ರಿಕ ಚುನಾವಣೆ-2021ರ ಹಿನ್ನೆಲೆಯಲ್ಲಿ (ಸೆ.3) ನಗರದ 58 ವಾರ್ಡ್ಗಳಲ್ಲಿಂದು ಮತದಾನ ನಡೆಯಲಿದೆ. ಇದೇ ಮೊದಲ ಸಲ ರಾಜಕೀಯ ಪಕ್ಷಗಳ ಚಿಹ್ನೆಗಳ ಆಧಾರದ ಮೇಲೆ ಚುನಾವಣೆ ನಡೆಯುತ್ತಿರುವ ಕಾರಣ ಹೆಚ್ಚಿನ ಕುತೂಹಲ ಮೂಡಿಸಿದೆ. ಇಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6ರವರೆಗೆ ಮತದಾನ ನಡೆಯಲಿದ್ದು, 58 ವಾರ್ಡ್ಗಳಲ್ಲಿ 385 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲಿದ್ದಾರೆ.
ಪ್ರಮುಖವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಪೈಪೋಟಿ ಇದ್ದು, ಇದರ ಮಧ್ಯೆ ಎಂಇಎಸ್ ಕೂಡ ಕಣಕ್ಕಿಳಿದಿದೆ.
4.31 ಲಕ್ಷ ಮತದಾರರು:ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಒಟ್ಟು 4,31,383 ಮತದಾರರು ಮತದಾನದ ಹಕ್ಕು ಹೊಂದಿದ್ದಾರೆ.ಇದರಲ್ಲಿ 560 ಸೇವಾ ಮತದಾರರು ಸೇರಿದಂತೆ 2,15,364 ಪುರುಷರು ಹಾಗೂ 2,16,019 ಮಹಿಳಾ ಮತದಾರರಿದ್ದಾರೆ. 58 ವಾರ್ಡುಗಳಲ್ಲಿ ಒಟ್ಟಾರೆ 402 ಮತಗಟ್ಟೆಗಳು ಮತ್ತು 13 ಉಪ ಮತಗಟ್ಟೆಗಳು ಸೇರಿದಂತೆ 415 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.