ಬೆಂಗಳೂರು/ಬೆಳಗಾವಿ : ಜಿಲ್ಲೆಯ ರಾಜಕಾರಣದಲ್ಲಿ ಜಾರಕಿಹೊಳಿ ಕುಟುಂಬ ತನ್ನದೇ ಆದ ಪ್ರಾಬಲ್ಯವನ್ನು ಹೊಂದಿದೆ. ಈ ಬಾರಿ ಮೂವರು ಜಾರಕಿಹೊಳಿ ಸಹೋದರರು ಚುನಾವಣಾ ಕಣದಲ್ಲಿ ಸ್ಪರ್ಧಿಸಿ ಮತ್ತೊಮ್ಮೆ ಗೆಲುವು ಸಾಧಿಸಿದ್ದಾರೆ. ಒಬ್ಬ ಸಹೋದರ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕುತೂಹಲ ಮೂಡಿಸಿದ್ದ ಬೆಳಗಾವಿಯ ಗೋಕಾಕ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಸತತವಾಗಿ 7ನೇ ಬಾರಿಗೆ ಸಾಹುಕಾರ್ ವಿಧಾನಸಭೆ ಪ್ರವೇಶ ಮಾಡಿದಂತಾಗಿದೆ. ರಮೇಶ್ ಜಾರಕಿಹೊಳಿ ಅವರಿಗೆ 104068 ಮತಗಳು ಲಭಿಸಿದ್ದರೆ, ಪ್ರತಿಸ್ಪರ್ಧಿ ಕಡಾಡಿ ಮಹಾಂತೇಶ್ 79431 ಮತಗಳಿಗೆ ತೃಪ್ತಿಪಟ್ಟಿದೆ.
ಸಿಡಿ ಹಗರಣ ಸೇರಿದಂತೆ ಲಕ್ಷ್ಮಣ ಸವದಿ ಅವರೊಂದಿಗಿನ ಗುದ್ದಾಟ, ಲಕ್ಷ್ಮಿ ಹೆಬ್ಬಾಳ್ಕರ್ ಜೊತೆಗಿನ ವಾಕ್ಸಮರ ಮೂಲಕ ಹೆಚ್ಚು ಸುದ್ದಿಯಲ್ಲಿದ್ದ ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮಹಾಂತೇಶ್ ಕಡಾಡಿ ಸೋಲು ಕಂಡಿದ್ದಾರೆ. ಗೋಕಾಕ್ ಮಾತ್ರವಲ್ಲದೇ ಬೆಳಗಾವಿ ಜಿಲ್ಲೆಯ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಹೊಣೆ ಅವರು ಹೊತ್ತಿದ್ದರು.
2018ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೋಕಾಕ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಮೇಶ್ ಜಾರಕಿಹೊಳಿ, ಬಿಜೆಪಿ ಅಭ್ಯರ್ಥಿ ಅಶೋಕ್ ನಿಂಗಯ್ಯ ಸ್ವಾಮಿ ಪೂಜಾರಿ ಹಾಗೂ ಜೆಡಿಎಸ್ ಅಭ್ಯರ್ಥಿ ಕರೆಪ್ಪ ಲಕ್ಕಪ್ಪ ತಳವಾರ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ 2019ರಲ್ಲಿ ಆಪರೇಷನ್ ಕಮಲಕ್ಕೆ ಒಳಗಾದ ರಮೇಶ್ ಜಾರಕಿಹೊಳಿ, ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಅಭ್ಯರ್ಥಿಯಾಗಿ ಉಪ ಚುನಾವಣೆ ಎದುರಿಸಿದ್ದರು. 2019ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸಹೋದರ ಲಖನ್ ಲಕ್ಷ್ಮಣರಾವ್ ಜಾರಕಿಹೊಳಿ ಹಾಗೂ ಜೆಡಿಎಸ್ ಅಭ್ಯರ್ಥಿ ಅಶೋಕ್ ನಿಂಗಯ್ಯ ಸ್ವಾಮಿ ಪೂಜಾರಿ ಅವರನ್ನು ಮಣಿಸಿ ಜಯಭೇರಿ ಬಾರಿಸಿದ್ದರು. ಬೆನ್ನಲ್ಲೇ ಸಚಿವ ಸ್ಥಾನವನ್ನೂ ಗಿಟ್ಟಿಸಿಕೊಂಡಿದ್ದರು.