ಬೆಂಗಳೂರಿನ ಆರ್.ಟಿ.ನಗರದಲ್ಲಿರುವ ನಿವಾಸದೆದುರು ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ ಬೆಂಗಳೂರು: ಬೆಳಗಾವಿಯಲ್ಲಿ ಸವದತ್ತಿ ಯಲ್ಲಮ್ಮನ ದರ್ಶನಕ್ಕೆಂದು ತೆರಳುತ್ತಿದ್ದ ಭಕ್ತರ ವಾಹನ ಮರಕ್ಕೆ ಡಿಕ್ಕಿಯಾಗಿ 6 ಜನ ಸಾವಿಗೀಡಾದ ಘಟನೆ ಇಂದು ನಸುಕಿನ ಜಾವ ನಡೆದಿತ್ತು. ಇದೀಗ ದುರ್ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಹಾಗೂ ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಆರ್.ಟಿ.ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಈಗಾಗಲೇ ಜಿಲ್ಲಾಡಳಿತದೊಂದಿಗೆ ಸಂಪರ್ಕದಲ್ಲಿದ್ದು, ಪ್ರಕರಣದ ತನಿಖೆಗೂ ಸೂಚಿಸಲಾಗಿದೆ' ಎಂದರು.
ಭೀಕರ ಅಪಘಾತ:ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ಹೊರಟಿದ್ದ ಭಕ್ತರ ವಾಹನ ಹುಲಕುಂದ ಗ್ರಾಮದಿಂದ ರಾಮದುರ್ಗ ಮಾರ್ಗವಾಗಿ, ಚುಂಚನೂರು ಗ್ರಾಮದ ಸರಹದ್ದಿಗೆ ಬಂದಿತ್ತು. ವಾಹನವು ವೇಗವಾಗಿ ಚಲಿಸುತ್ತಿದ್ದರಿಂದ ಚುಂಚನೂರು ವಿಠಲಪ್ಪನ ದೇವಸ್ಥಾನದ ಮುಂದಿನ ದೊಡ್ಡ ಆಲದ ಮರಕ್ಕೆ ಗುದ್ದಿ ಉರುಳಿ ಬಿದ್ದು, ವಾಹನ ಜಖಂಗೊಂಡಿತ್ತು. ಈ ವೇಳೆ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಇದನ್ನೂ ಓದಿ:ಗೂಡ್ಸ್ ವಾಹನ ಮರಕ್ಕೆ ಡಿಕ್ಕಿ: ಯಲ್ಲಮ್ಮನ ದರ್ಶನಕ್ಕೆ ತೆರಳುತ್ತಿದ್ದ 6 ಮಂದಿ ಸಾವು
ದಶಪಥ ರಸ್ತೆ ಲೋಕಾರ್ಪಣೆ ವಿಚಾರ: ಬೆಂಗಳೂರು-ಮೈಸೂರು ದಶಪಥ ರಸ್ತೆಯ ವೈಮಾನಿಕ ಸಮೀಕ್ಷೆಯಲ್ಲಿ ಲೋಪದೋಷಗಳು ಕಂಡುಬಂದಿದ್ದು ಈ ತಿಂಗಳಲ್ಲಿ ಲೋಕಾರ್ಪಣೆಗೆ ಮುಂದಾಗಿರುವ ಬಗ್ಗೆ ಪ್ರತಿಕ್ರಿಯಿಸಿ, 'ಕೆಲಸ ಸಂಪೂರ್ಣವಾದ ನಂತರವೇ ಲೋಕಾರ್ಪಣೆಯಾಗಲಿದೆ. ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಇಂದು ಸಂಜೆ ಸಭೆಯಲ್ಲಿ ಚರ್ಚಿಸಿ, ಪರಿಸ್ಥಿತಿ ಪರಿಶೀಲಿಸಿ ತೀರ್ಮಾನಕ್ಕೆ ಬರಲಾಗುವುದು' ಎಂದರು. ಇದೇ ವೇಳೆ, ಸ್ಯಾಂಟ್ರೋ ರವಿ ಜೊತೆ ಬಿಜೆಪಿ ನಾಯಕರು ಸಂಪರ್ಕದಲ್ಲಿರುವ ಆರೋಪ ಪ್ರಶ್ನೆಗೆ ಉತ್ತರಿಸಿ, 'ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಯಾಂಟ್ರೋ ರವಿ ಬಗ್ಗೆ ಹೇಳಿರುವುದು, ಅವರು ಯಾರು ಎಂದೂ ನನಗೆ ಗೊತ್ತಿಲ್ಲ' ಎಂದರು.
ಆ್ಯಸಿಡ್ ದಾಳಿ ಸಂತ್ರಸ್ತೆಗೆ ಉದ್ಯೋಗದ ಭರವಸೆ: ಪ್ರೀತಿ ನಿರಾಕರಿಸಿದ್ದಕ್ಕೆ ಆ್ಯಸಿಡ್ ದಾಳಿಗೆ ಒಳಗಾಗಿದ್ದ ಯುವತಿ ಪ್ರೇಮಾಳಿಗೆ ಹೆಚ್ಚಿನ ಚಿಕಿತ್ಸೆಗೆ ನೆರವು ನೀಡುವುದಾಗಿ ತಿಳಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉದ್ಯೋಗದ ಭರವಸೆಯನ್ನೂ ನೀಡಿದ್ದಾರೆ. ಹೆಚ್ಚುವರಿ ಆರೋಗ್ಯ ಚಿಕಿತ್ಸೆ, ಸರ್ಜರಿಗೆ ಸಹಾಯ ಮಾಡುವಂತೆ ಪ್ರೇಮಾ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿರುವ ಸಿಎಂ, ಹೆಚ್ಚುವರಿ ಚಿಕಿತ್ಸೆ ಸರ್ಕಾರದ ವತಿಯಿಂದಲೇ ಭರಿಸಲಾಗುವುದು. ಆರೋಗ್ಯ ಚೇತರಿಕೆಯಾದ ಬಳಿಕ ಉದ್ಯೋಗ ನೀಡುವುದಾಗಿಯೂ ಹೇಳಿದರು.
ಈ ಪ್ರಕರಣದ ಹಿನ್ನೆಲೆ ಹೀಗಿದೆ..:ತನ್ನ ಪ್ರೀತಿ ನಿರಾಕರಿಸಿದಳು ಎಂಬ ಕಾರಣಕ್ಕೆ 2022ರ ವರ್ಷದ ಏಪ್ರಿಲ್ 28ರಂದು ಮುತ್ತೂಟ್ ಫೈನಾನ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ನಾಗೇಶ ಎನ್ನುವಾತ ಆ್ಯಸಿಡ್ ಎರಚಿ ದುಷ್ಕ್ರತ್ಯ ಮೆರೆದಿದ್ದ. ನಂತರ ಆರೋಪಿ ತಲೆಮರೆಸಿಕೊಂಡಿದ್ದು ಸತತ ಕಾರ್ಯಾಚರಣೆ ನಡೆಸಿದ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದರು.
ಇದನ್ನೂ ಓದಿ:ಆ್ಯಸಿಡ್ ದಾಳಿ: ಯುವತಿ ಆರೋಗ್ಯದಲ್ಲಿ ಚೇತರಿಕೆ, ಗ್ಯಾಂಗ್ರಿನ್ನಿಂದ ಬಳಲುತ್ತಿರುವ ಆರೋಪಿ