ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ ಇಲ್ಲಿದೆ. ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ನಲ್ಲಿ (ಬಿಇಎಲ್) ಖಾಲಿ ಇರುವ ಮ್ಯಾನೇಜ್ಮೆಂಟ್ ಇಂಡಸ್ಟ್ರೀಯಲ್ ಟ್ರೈನಿ ಹುದ್ದೆಗೆ ಅಧಿಸೂಚನೆ ಹೊರಡಿಸಲಾಗಿದೆ. ಒಂದು ವರ್ಷದ ಅವಧಿಗೆ ಈ ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆಸಲಾಗುವುದು. ಅಭ್ಯರ್ಥಿಯ ಕಾರ್ಯಕ್ಷಮತೆ ಆಧಾರದ ಮೇಲೆ ಮೂರು ವರ್ಷಗಳ ಕಾಲ ವಿಸ್ತರಣೆ ನಡೆಸಲಾಗುವುದು. ಈ ಹುದ್ದೆ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಹುದ್ದೆ ವಿವರ:ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ನ ಬೆಂಗಳೂರು ಘಟಕದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುವುದು.
ವಿದ್ಯಾರ್ಹತೆ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಐಸಿಡಬ್ಲ್ಯೂಎ ಇಂಟರ್ ಅಥವಾ ಸಿಎ ಇಂಟರ್ ವಿದ್ಯಾರ್ಹತೆ ಹೊಂದಿರಬೇಕು. ಇದಕ್ಕಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.
ವಯೋಮಿತಿ:ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಠ ವಯೋಮಿತಿ 25 ವರ್ಷ ಆಗಿರಬೇಕು. ಒಬಿಸಿ ಅಭ್ಯರ್ಥಿಗಳು 3 ವರ್ಷ, ಪ.ಜಾತಿ, ಪ.ಪಂ ಅಭ್ಯರ್ಥಿಗಳು 5 ವರ್ಷ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.
ವೇತನ: ಈ ಹುದ್ದೆಗೆ ಮೊದಲ ವರ್ಷದಲ್ಲಿ 18 ಸಾವಿರ ರೂ. ಎರಡನೇ ವರ್ಷ 19 ಸಾವಿರ ರೂ. ಮತ್ತು ಮೂರನೇ ವರ್ಷ 20 ಸಾವಿರ ರೂ. ಗಳ ವೇತನ ನಿಗದಿ ಮಾಡಲಾಗಿದೆ.