ಬೆಂಗಳೂರು: ನಗರದ ಡಿ.ಜೆ.ಹಳ್ಳಿ ಘಟನೆ ನಂತರ ಎಸ್ಡಿಪಿಐ ಸಂಘಟನೆಯ ಹೆಸರು ಮುನ್ನೆಲೆಗೆ ಬಂದಿದೆ. ಹಿಂದೆ ಕರ್ನಾಟಕದಲ್ಲಿ ಕೆಎಫ್ಡಿ ಆಗಿದ್ದ ಸಂಘಟನೆಯನ್ನು ನಿಷೇಧ ಮಾಡಲಾಗಿತ್ತು. ನಂತರ ಪಿಎಫ್‌ಐ ಮತ್ತು ಎಸ್ಡಿಪಿಐ ಆಗಿ ಹೆಸರು ಬದಲಿಸಿಕೊಂಡು ಬಹಿರಂಗವಾಗಿ ಈ ಸಂಘಟನೆಗಳು ತನ್ನ ಚಟುವಟಿಕೆಯಲ್ಲಿ ತೊಡಗಿವೆ. ಕೆಲವೊಮ್ಮೆ ಸಮಾಜಮುಖಿ ಕಾರ್ಯಗಳಿಂದಲೂ ಗುರುತಿಸಿಕೊಂಡಿದೆ.
ಎಸ್ಡಿಪಿಐ 2009ರಲ್ಲಿ ಪ್ರಾರಂಭವಾದ ರಾಜಕೀಯ ಪಕ್ಷ. ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (ಸಿಮಿ) ಯನ್ನು ನಿಷೇಧಿಸಿದಾಗ, ಇದರ ಸದಸ್ಯರು ಪಿಎಫ್‌ಐ ಹಾಗೂ ಎಸ್ಡಿಪಿಐ ಸಂಘಟನೆಯಲ್ಲಿ ಗುರುತಿಸಿಕೊಂಡರು. ಸಿಮಿಯಲ್ಲಿ ಭಟ್ಕಳ್ ಸಹೋದರರು ಸದಸ್ಯರಾಗಿದ್ದರು. ಸಿಮಿ ಭಯೋತ್ಪಾದಕ ಸಂಘಟನೆಯಾಗಿತ್ತು. ಇತರ ಸದಸ್ಯರು ಕೇರಳ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಹೆಚ್ಚು ಮಧ್ಯಮ ಸಂಘಟನೆಗಳನ್ನು ರಚಿಸಿದರು. ಈ ಹಿಂದೆ ನಿಷೇಧಕ್ಕೊಳಗಾಗಿದ್ದ ಸಿಮಿ ಸಂಘಟನೆಯ ತದ್ರೂಪದಂತೆ ಎಸ್‍ಡಿಪಿಐ ಮತ್ತು ಪಿಎಫ್‌ಐ ಕಾರ್ಯ ನಿರ್ವಹಿಸುತ್ತಿವೆ. ಸಿಮಿ ಸಂಘಟನೆಯಲ್ಲಿದ್ದ ಬಹುತೇಕರು ಈಗ ಈ ಸಂಘಟನೆಗಳಲ್ಲಿ ಈಗ ಗುರುತಿಸಿಕೊಂಡಿದ್ದಾರೆ.
ಉದಾಹರಣೆಗೆ, ಕರ್ನಾಟಕದಲ್ಲಿ ಅವರು ಘನತೆಗಾಗಿ ಕರ್ನಾಟಕ ವೇದಿಕೆಯನ್ನು ರಚಿಸಿದರು. ಆದರೆ, ಕೆಲವು ಸದಸ್ಯರು ಮತ್ತು ಸಂಸ್ಥೆಗಳು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಡಿಯಲ್ಲಿ ಒಂದಾಗಿವೆ. ಆರು ರಾಜ್ಯಗಳಲ್ಲಿ ಎಸ್‌ಡಿಪಿಐ ಇದೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಪಶ್ಚಿಮ ಬಂಗಾಳ, ಮತ್ತು ದೆಹಲಿಯಲ್ಲಿ ಚುನಾವಣೆಗಳನ್ನು ಸಹ ಎದುರಿಸಿವೆ. ಆರಂಭದಲ್ಲಿ ಎಸ್ಡಿಪಿಐ ಸ್ಥಳೀಯ ಮಟ್ಟದ ಚುನಾವಣೆಗಳಲ್ಲಿ ಸ್ಪರ್ಧೆಗಿಳಿದು ನಂತರ 2013 ರಿಂದ ವಿಧಾನಸಭೆ ಮತ್ತು ಸಂಸತ್ ಚುನಾವಣೆಯಲ್ಲೂ ಆಯ್ದ ಸ್ಥಾನಗಳಿಗೆ ಸ್ಪರ್ಧಿಸಿದೆ. ಆದರೆ, ಎಸ್‌ಡಿಪಿಐ ಯಾವುದೇ ಸ್ಥಾನಗಳನ್ನು ಗೆದ್ದಿಲ್ಲ. ಬಿಬಿಎಂಪಿಯಲ್ಲಿ ಎರಡು ಸ್ಥಾನಗಳನ್ನು ಗೆದ್ದಿವೆ.
ಮೊದಲೇ ಅದನ್ನು ನಿಷೇಧಿಸುವ ಪ್ರಯತ್ನಗಳು ನಡೆದಿದ್ದವು. ಆದರೆ, ಹಿಂದಿನ ಕಾಂಗ್ರೆಸ್ ಸರ್ಕಾರವು ಈ ಪ್ರಕ್ರಿಯೆಯನ್ನು ಪ್ರಾರಂಭಿಸಿದರೂ ಅದನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ - ಬಹುಶಃ ಕಾನೂನು ಸಮಸ್ಯೆಗಳು, ಕೆಲವು ಒತ್ತಡಗಳಿಂದ ಪಿಎಫ್‌ಐ ಹಾಗೂ ಎಸ್ಡಿಪಿಐ ಸಂಘಟನೆಗಳನ್ನು ನಿಷೇಧಿಸಲು ಸಾಧ್ಯವಾಗಲಿಲ್ಲ ಎಂದು ಹೇಳಲಾಗುತ್ತಿದೆ.
ಎಲ್ಲಿ ಸಕ್ರೀಯ!?
ಪ್ರತಿ ಕ್ಷೇತ್ರದಲ್ಲಿ, ಅಲ್ಪಸಂಖ್ಯಾತ ಸಮುದಾಯಗಳ ಸುಮಾರು 1,000 ದಿಂದ 2,000 ಮತಗಳು ಎಸ್‌ಡಿಪಿಐಗೆ ಹೋಗುತ್ತಿದ್ದವು. ಎಸ್‌ಡಿಪಿಐ ಹೆಚ್ಚು ಕರಾವಳಿ, ಮಂಗಳೂರು ಮತ್ತು ಬೆಂಗಳೂರಿನಲ್ಲಿ ಸಕ್ರಿಯವಾಗಿದೆ. ಎಸ್‌ಡಿಪಿಐ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಬಿಜೆಪಿಗೆ ಲಾಭವಾಗುತ್ತದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬಂದಿವೆ. ಏಕೆಂದರೆ ಪ್ರತಿ ಕ್ಷೇತ್ರದಲ್ಲೂ ಎಸ್‌ಡಿಪಿಐ ಕಾಂಗ್ರೆಸ್ ಮತಗಳನ್ನು ಸೆಳೆಯುತ್ತವೆ ಎಂಬುದು ವಿಶ್ಲೇಷಕರ ಅಭಿಪ್ರಾಯ.
ಈ ಹಿಂದೆ ಕೇಂದ್ರ ಸರ್ಕಾರದ ಉದ್ದೇಶಿತ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜ್ಯದ ಹಲವೆಡೆ ಕೋಮುಗಲಭೆ ಸಂಭವಿಸಿತ್ತು. ಅದರಲ್ಲೂ ಮಂಗಳೂರಿನಲ್ಲಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ನಡೆಸಿದ ಗೋಲಿಬಾರ್ಗೆ ಇಬ್ಬರು ಬಲಿಯಾಗಿದ್ದರು. ಈ ಗಲಭೆಗೆ ಕೇರಳದಿಂದ ಆಗಮಿಸಿದ್ದ ಎಸ್‍ಡಿಪಿಐ ಕಾರ್ಯಕರ್ತರೇ ಕಾರಣ ಎಂಬ ಆರೋಪ ಕೇಳಿಬಂದಿತ್ತು.
ಟಿಪ್ಪು ಜಯಂತಿ ವಿರೋಧಿಸಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆದ ವೇಳೆ ವಿಹೆಚ್ಪಿಯ ಕುಟ್ಟಪ್ಪ ಎಂಬ ಕಾರ್ಯಕರ್ತ ಸಾವನ್ನಪ್ಪಿದ್ದರು. ಮೈಸೂರಿನಲ್ಲಿ ನಡೆದ ಘರ್ಷಣೆಯಲ್ಲೂ ಎಸ್‍ಡಿಪಿಐ ಕಾರ್ಯಕರ್ತರು ಶಾಮೀಲಾಗಿದ್ದರು ಎಂದು ಹೇಳಲಾಗಿದೆ. ಈ ಸಂಘನೆಗಳನ್ನು ನಿಷೇಸುವಂತೆ ಬಿಜೆಪಿ ಸೇರಿದಂತೆ ಹಲವು ಮುಖಂಡರು ಒತ್ತಡ ಹೇರಿದ್ದರು. ಬೆಂಗಳೂರು, ಮಂಗಳೂರಿನಲ್ಲಿ ಸಾಕಷ್ಟು ಭಯೋತ್ಪಾದನಾ ಚಟುವಟಿಕೆಗಳು ನಡೆಸುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಆದರೆ, ಹಿಂದಿನ ಕಾಂಗ್ರೆಸ್ ಸರ್ಕಾರ ಈ ಸಂಘಟನೆಗಳ ಮೇಲೆ ಹೂಡಲಾಗಿದ್ದ ಪ್ರಕರಣಗಳನ್ನು ತೆಗೆದಾಕಿತ್ತು. ಇಷ್ಟಾದರೂ ಈ ಸಂಘಟನೆಗಳು ತಮ್ಮ ಚಟುವಟಿಕೆ ನಿಲ್ಲಿಸಿರಲಿಲ್ಲ. ಬೇರೆ ಬೇರೆ ದೇಶದಲ್ಲಿರುವ ಸಂಘಟನೆಗಳ ಜತೆಯೂ ಇವು ಸಂಪರ್ಕ ಹೊಂದಿವೆ. ಹೆಸರುಗಳನ್ನು ಬದಲಾವಣೆ ಮಾಡಿಕೊಂಡು ಈ ಸಂಘಟನೆಗಳು ತಮ್ಮ ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿವೆ. ಈಗಾಗಲೇ ಉತ್ತರ 0ಪ್ರದೇಶದಲ್ಲಿ ಎಸ್ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗಳ ಮೇಲೆ ಅಲ್ಲಿನ ಬಿಜೆಪಿ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ಕೊರೊನಾ ಸಂದರ್ಭದಲ್ಲಿ ಪಾದರಾಯನಪುರದಲ್ಲಿ ನಡೆದ ಗಲಾಟೆ ಪ್ರಕರಣದಲ್ಲೂ ಪಿಎಫ್‌ಐ ಹೆಸರು ಹೇಳಿ ಬಂದಿತ್ತು. ಈಗ ಅದೇ ಪಿಎಫ್ಐನ ರಾಜಕೀಯ ಘಟಕ ಎಸ್ಡಿಪಿಐ ಹೆಸರು ಡಿ.ಜೆ.ಹಳ್ಳಿ ಗಲಭೆಯಲ್ಲೂ ಕೇಳಿ ಬರುತ್ತಿದೆ. ಕೇವಲ ಬೆಂಗಳೂರು ಅಲ್ಲದೇ ಮಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಹಲವು ಕಡೆ ನಡೆದ ಗಲಭೆ ಪ್ರಕರಣಗಳಲ್ಲೂ ಪಿಎಫ್‌ಐ ಹಾಗೂ ಎಸ್‌ಡಿಪಿಐ ಹೆಸರು ಥಳಕು ಹಾಕಿಕೊಂಡಿದೆ. ಈ ಎರಡೂ ಸಂಘಟನೆಗಳನ್ನೂ ನಿಷೇಧಿಸಬೇಕೆಂಬ ಒತ್ತಾಯಗಳು ಹೆಚ್ಚುತ್ತಿವೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿರುವ ಬಿಜೆಪಿ ನಾಯಕರು, ಪ್ರತಿ ಬಾರಿ ಗಲಭೆಗಳಾದಾಗಲೂ ನಿಷೇಧದ ಬಗ್ಗೆ ಮಾತನಾಡುತ್ತಾರೆ. ಆದರೆ, ಅದು ಕಾರ್ಯಗತವಾಗುತ್ತಿಲ್ಲ. ಬಿಜೆಪಿ ನಾಯಕರು, ಹಿಂದೂ ಮುಖಂಡರ ಹತ್ಯೆಗೆ ಸಂಚು ರೂಪಿಸಿದ, ಭಯೋತ್ಪಾದನೆ ಚಟುವಟಿಕೆಯಲ್ಲಿ ತೊಡಗಿದ ಆರೋಪದ ಹಿನ್ನೆಲೆಯಲ್ಲಿ ಎಸ್ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗಳನ್ನು ನಿಷೇಧಿಸಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಜನವರಿಯಲ್ಲೇ ತಿಳಿಸಿದ್ದರು.
ರಾಜ್ಯದ ಹಲವು ಕಡೆ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ, ಮಂಗಳೂರಿನಲ್ಲಿ ಹಿಂಸಾಚಾರಕ್ಕೆ ಈ ಸಂಘಟನೆಗಳೇ ಕಾರಣವಾಗಿದ್ದು, ಈ ಸಂಘಟನೆಗಳು ನಡೆಸುತ್ತಿರುವ ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸಮಗ್ರ ಮಾಹಿತಿ ಕಲೆ ಹಾಕಲಾಗಿದ್ದು, ಈ ಸಂಘಟನೆಗಳನ್ನು ನಿಷೇಧಿಸುವ ಸಂಬಂಧ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ ಎಂದಿದ್ದರು.
ಇನ್ನು ಎಸ್ಡಿಪಿಐ ಈ ಕೃತ್ಯ ಎಸಗಿದ್ದರೆ ಕಾಂಗ್ರೆಸ್ ಏಕೆ ಮೌನ ವಹಿಸುತ್ತದೆ ಎಂಬ ಪ್ರಶ್ನೆ ಹುಟ್ಟುತ್ತದೆ. ಕಾಂಗ್ರೆಸ್ ಪಕ್ಷಕ್ಕೆ ಸಾಂಪ್ರದಾಯಿಕವಾಗಿ ಬರುತ್ತಿರುವ ಅಲ್ಪಸಂಖ್ಯಾತ ಸಮುದಾಯದವರ ಮತಗಳು ಈಗ ಎಸ್ಡಿಪಿಐ ಕಡೆ ವಾಲುತ್ತಿದೆ. ಎಸ್ಡಿಪಿಐನ ಬಲವರ್ಧನೆ ಆಗುತ್ತಿರುವುದು ಇತ್ತೀಚಿನ ಚುನಾವಣೆಗಳಿಂದ ಸ್ಪಷ್ಟವಾಗಿದೆ. ಕೆಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಸೋಲಿಗೂ ಇದೇ ಕಾರಣವಾಗಿದೆ. ಎಸ್ಡಿಪಿಐ ನಿಧಾನವಾಗಿ ಮುಸ್ಲಿಂ ಸಮುದಾಯದವರ ಬೆಂಬಲ ಹೆಚ್ಚಿಸಿಕೊಳ್ಳುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಡಿ.ಜೆ. ಹಳ್ಳಿ ಗಲಭೆಯಲ್ಲಿ ಎಸ್ಡಿಪಿಐ ಕೈವಾಡ ಇಲ್ಲ. ದೂರು ನೀಡಲು ಪೊಲೀಸ್ ಠಾಣೆಗೆ ನಮ್ಮ ಸಂಘಟನೆಯವರು ಹೋಗಿದ್ದರು. ಗಲಭೆಯಲ್ಲಿ ಭಾಗಿಯಾಗಿದ್ದಾರೆಂದು ನಮ್ಮ ಸಂಘಟನೆಯ ಕೆಲ ಹೆಸರುಗಳನ್ನು ಹೇಳಲಾಗುತ್ತಿದೆ. ಆದರೆ, ಆ ವ್ಯಕ್ತಿಗಳೇ ಶಾಂತಿ ಕಾಪಾಡಲು ಶ್ರಮಿಸಿದ್ದರು. ಅವರದ್ದೇ ವಾಹನಗಳು ಗಲಭೆಯಲ್ಲಿ ಸುಟ್ಟಿವೆ. ನಮ್ಮದು ಜನಪರ ಸಂಘಟನೆಯಾಗಿದೆ. ಇಂಥ ಕೃತ್ಯಕ್ಕೆ ಉತ್ತೇಜನ ನೀಡುವುದಿಲ್ಲ. ಗಲಭೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಾವೇ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಎಂದು ಎಸ್ಡಿಪಿಐ ಮುಖಂಡ ಮೊಹಮ್ಮದ್ ಷರೀಫ್ ಅವರು ಮಾಧ್ಯಮಗಳ ಮೂಲಕ ಸ್ಪಷ್ಟಪಡಿಸಿದ್ದಾರೆ.