ಬೆಂಗಳೂರು:ಕೊರೊನಾ ಸಂದರ್ಭದಲ್ಲಿ ತಣ್ಣಗಾಗಿದ್ದ ಭಿಕ್ಷಾಟನೆ ದಂಧೆ ಇದೀಗ ರಾಜಧಾನಿಯಲ್ಲಿ ಮತ್ತೆ ಸಕ್ರಿಯವಾಗಿದೆ. ಹಸುಗೂಸುಗಳನ್ನು ಬಳಸಿಕೊಂಡು ಭಿಕ್ಷಾಟನೆ ನಡೆಸುತ್ತಿದ್ದವರು ಇದೀಗ ಮತ್ತೆ ಬೀದಿಗಿಳಿದಿದ್ದಾರೆ.
ರಾಜ್ಯದಲ್ಲಿ ಭಿಕ್ಷುಕರ ಸಂಖ್ಯೆ ಹಿಂದಿನಿಂದಲೂ ಏರಿಕೆಯಾಗುತ್ತಾ ಬರುತ್ತಿದೆ. ಸಮಾಜ ಕಲ್ಯಾಣ ಇಲಾಖೆಯ ಮಾಹಿತಿಯಂತೆ ಕಳೆದ ವರ್ಷ ರಾಜ್ಯದಲ್ಲಿ 2392 ಭಿಕ್ಷುಕರು ಪತ್ತೆಯಾಗಿದ್ದಾರೆ. ಇವರಲ್ಲಿ ಅತಿ ಹೆಚ್ಚು ಅಂದರೆ 750 ಕ್ಕೂ ಅಧಿಕ ಮಂದಿ ಭಿಕ್ಷುಕರು ರಾಜಧಾನಿ ಬೆಂಗಳೂರಿನಲ್ಲೇ ಇದ್ದಾರೆ. ಉಳಿದಂತೆ ಮೈಸೂರು, ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ಹೆಚ್ಚಿನ ಭಿಕ್ಷುಕರಿದ್ದಾರೆ. ಈ ಭಿಕ್ಷುಕರಲ್ಲಿ ಒಂದು ವರ್ಗ ಹೊಟ್ಟೆಪಾಡಿಗಾಗಿ ಭಿಕ್ಷೆ ಬೇಡಿದರೆ, ಮತ್ತೊಂದು ವರ್ಗ ದಂಧೆಯ ಜಾಲವಾಗಿ ಭಿಕ್ಷಾಟನೆ ನಡೆಸುತ್ತಿದೆ.
ರಾಜಧಾನಿಯಲ್ಲಿ ಚಿಗುರುತ್ತಿರುವ ಭಿಕ್ಷಾಟನೆ ದಂಧೆ ಹೊಟ್ಟೆಪಾಡಿಗೆ ಭಿಕ್ಷಾಟನೆ:
ಮನೆಯಿಂದ ಹೊರ ಹಾಕಲ್ಪಟ್ಟ ವೃದ್ಧರು, ನಿರ್ಗತಿಕರು, ದೈಹಕವಾಗಿ ಊನಗೊಂಡವರು ಹಾಗೂ ಅಲ್ಪ ಮಟ್ಟಿಗೆ ಮಂಗಳ ಮುಖಿಯರು ಈ ವರ್ಗದಲ್ಲಿದ್ದಾರೆ. ಅಸಂಘಟಿತರಾದ ಇವರು ಭಿಕ್ಷಾಟನೆ ನಡೆಸುವುದು ಬರೀ ಹೊಟ್ಟೆಪಾಡಿಗಾಗಿ ಅಷ್ಟೇ. ಇವರ ಉದ್ದೇಶವೇ ಹೊಟ್ಟೆಪಾಡಾಗಿರುವುದರಿಂದ ಜನ ಏನೇ ಕೊಟ್ಟರೂ ಇವರು ಸ್ವೀಕರಿಸುತ್ತಾರೆ. ಈ ವರ್ಗದ ಭಿಕ್ಷುಕರನ್ನು ಪೊಲೀಸರು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಈಗಾಗಲೇ ಭಿಕ್ಷುಕರ-ನಿರಾಶ್ರಿತರ ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಿದ್ದಾರೆ. ಅಲ್ಲಿಯೇ ಅವರಿಗೆ ಆಶ್ರಯ ಮತ್ತು ಕೆಲಸ ಕೊಡುವ ಪ್ರಯತ್ನ ನಡೆಯುತ್ತಿದೆ.
ದಂಧೆಯ ಭಾಗವಾಗಿ ಭಿಕ್ಷಾಟನೆ:
ಈ ವರ್ಗದ ಭಿಕ್ಷುಕರು ಮೇಲ್ನೋಟಕ್ಕೆ ಭಿಕ್ಷುಕರೇ ಆದರೂ ಇವರು ಭಿಕ್ಷಾಟನೆ ದಂಧೆಕೋರರ ಪರವಾಗಿ ಬೀದಿಗಿಳಿಯುತ್ತಾರೆ. ಲಾಕ್ಡೌನ್ ಸಂದರ್ಭದಲ್ಲಿ ಪೊಲೀಸರು ಹಾಗೂ ಸಮಾಜ ಕಲ್ಯಾಣ ಅಧಿಕಾರಿಗಳು ಕರೆದೊಯ್ದು ನಿರಾಶ್ರಿತರ ಕೇಂದ್ರಕ್ಕೆ ಹಾಕುತ್ತಾರೆಂಬ ಲೆಕ್ಕಾಚಾರದಲ್ಲಿ ನಾಪತ್ತೆಯಾಗಿದ್ದ ಇವರು ಇದೀಗ ಮತ್ತೆ ತಮ್ಮ ಕಾರ್ಯಾಚರಣೆ ಆರಂಭಿಸಿದ್ದಾರೆ. ಹೀಗಾಗಿ ರಾಜಧಾನಿಯಲ್ಲಿ ತಣ್ಣಗಾಗಿದ್ದ ಭಿಕ್ಷಾಟನೆ ದಂಧೆ ಇದೀಗ ಮತ್ತೆ ಸಕ್ರಿಯವಾಗಿದೆ.
ಬರಿಗೈಯಲ್ಲಿ ಹೋದರೆ ಭಿಕ್ಷೆಯ ಪ್ರಮಾಣ ಕಡಿಮೆಯಾಗುತ್ತದೆ ಎಂದು ನಿಖರವಾಗಿ ಲೆಕ್ಕ ಹಾಕುವ ಇವರು ಮಹಿಳೆಯರನ್ನು ಹಸುಗೂಸುಗಳ ಜೊತೆ ಭಿಕ್ಷಾಟನೆಗೆ ಇಳಿಸುತ್ತಿದ್ದಾರೆ. ದಿನಕ್ಕೆ 50 ರಿಂದ 100 ರೂಪಾಯಿ ಬಾಡಿಗೆಗೆ ಕೂಲಿ ಕಾರ್ಮಿಕರ ಮಕ್ಕಳನ್ನು ಕರೆತಂದು ಭಿಕ್ಷಾಟನೆ ಮಾಡುತ್ತಿದ್ದಾರೆ. ಕೆಲವರಂತೂ ಮಕ್ಕಳಿಗೆ ನಿದ್ರೆ ಮಾತ್ರೆ ಹಾಕಿ ಜೋಳಿಗೆಯಲ್ಲಿ ಹಾಕಿಕೊಂಡು ಜನರಲ್ಲಿ ಮರುಕ ಹುಟ್ಟಿಸಿ ಭಿಕ್ಷೆ ಬೇಡುತ್ತಾರೆ. ಭಿಕ್ಷಾಟನೆಯ ಹಿಂದಿನ ಜಾಲದ ಬಗ್ಗೆ ಅರಿವಿಲ್ಲದ ಸಾಮಾನ್ಯ ಜನ ಕಂಕುಳಲ್ಲಿ ಎಳೆಯ ಮಕ್ಕಳನ್ನಿಟ್ಟುಕೊಂಡು ಸಿಗ್ನಲ್ಗಳಲ್ಲಿ, ದೇವಸ್ಥಾನಗಳ ಮುಂಭಾಗದಲ್ಲಿ, ಟೋಲ್ಗೇಟ್ಗಳಲ್ಲಿ ಕೈಚಾಚುವ ಮಹಿಳೆಯ ಕೈಗೆ ಹತ್ತಿಪ್ಪತ್ತು ರೂಪಾಯಿ ಕೊಟ್ಟು ಕೃತಾರ್ಥ ಭಾವಕ್ಕೆ ಒಳಗಾಗುತ್ತಿದ್ದಾರೆ.
ಕರ್ನಾಟಕ ಭಿಕ್ಷಾಟನೆ ನಿಷೇಧ ಕಾಯ್ದೆ:
ಭಿಕ್ಷಾಟನೆ ತೊಲಗಿಸಿ ಅವರಿಗೆ ಪುನರ್ ವಸತಿ ಕಲ್ಪಿಸಲು ರಾಜ್ಯ ಸರ್ಕಾರ ಕರ್ನಾಟಕ ಭಿಕ್ಷಾಟನೆ ನಿಷೇಧ ಕಾಯ್ದೆ-1975 ನ್ನು ಜಾರಿ ಮಾಡಿದೆ. ಈ ಕಾಯ್ದೆ ತೀರಾ ಹಳೆಯದಾಗಿದ್ದು, ಪರಿಣಾಮಕಾರಿಯಾಗಿ ಇಲ್ಲದಿರುವುದರಿಂದ ಕಾಯ್ದೆಗೆ ತಿದ್ದುಪಡಿ ತರಬೇಕು ಎಂಬ ಕೂಗಿದೆ. ಆದರೆ ಈವರೆಗೆ ಸರ್ಕಾರ ಇದನ್ನು ಜಾರಿ ಮಾಡಿಲ್ಲ. ಇನ್ನು ಕಾಯ್ದೆಯ ಸೆಕ್ಷನ್ 12ರ ಪ್ರಕಾರ ಭಿಕ್ಷಾಟನೆ ಕಾನೂನು ಬಾಹಿರವಾಗಿದ್ದು, 3 ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಈ ಹಿಂದೆ ಹಸುಗೂಸುಗಳನ್ನು ಭಿಕ್ಷಾಟನೆಗೆ ಬಳಸಿಕೊಳ್ಳುವ ಜಾಲದ ವಿರುದ್ಧ ಕ್ರಮ ಜರುಗಿಸುವುದಾಗಿ ಹೇಳಿದ್ದ ರಾಜ್ಯ ಸರ್ಕಾರ ಗೃಹ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ಜಂಟಿ ಸಮಿತಿ ರೂಪಿಸಿ ಹೆಚ್ಚಿನ ಅಧಿಕಾರ ನೀಡುವುದಾಗಿ ಹೇಳಿತ್ತು. ಇದು ಕೂಡ ಇನ್ನೂ ಚರ್ಚೆಯ ಹಂತದಲ್ಲೇ ಉಳಿದಿದೆ.
ಮತ್ತೆ ಚಿಗುರುತ್ತಿರುವ ಭಿಕ್ಷಾಟನೆ ದಂಧೆ:
ಕೊರೊನಾ ಬಳಿಕ ತಣ್ಣಗಾಗಿದ್ದ ಭಿಕ್ಷಾಟನೆ ದಂಧೆೆ ರಾಜಧಾನಿಯಲ್ಲಿ ಇತ್ತೀಚೆಗೆ ಮತ್ತೆ ಸಕ್ರಿಯವಾಗಿದೆ. ಈ ಕುರಿತು ಗ್ರೌಂಡ್ ರಿಪೋರ್ಟ್ಗಿಳಿದ ಈಟಿವಿ ಭಾರತದ ಲೋಗೋ ಕಾಣಿಸುತ್ತಿದ್ದಂತೆ ಹಸುಗೂಸು ಎತ್ತಿಕೊಂಡಿದ್ದ ಮಹಿಳೆ ಯಾವುದೇ ಪ್ರತಿಕ್ರಿಯೆ ನೀಡದೆ ಸ್ಥಳದಿಂದ ಪರಾರಿಯಾಗಿದ್ದು ದಂಧೆಯ ವಾಸ್ತವತೆಯ ಬಗ್ಗೆ ಅನುಮಾನ ಹೆಚ್ಚಿಸಿದೆ. ಮತ್ತೊಂದೆಡೆ ಕೊರೊನಾ ಪರಿಣಾಮವಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ವಯೋವೃದ್ಧರು ಪ್ರಮುಖ ರಸ್ತೆಗಳ ಸಿಗ್ನಲ್ ಹಾಗೂ ಫುಟ್ಪಾತ್ಗಳಲ್ಲಿ ಭಿಕ್ಷೆ ಬೇಡುತ್ತಿದ್ದಾರೆ. ಈ ಕುರಿತು ಪೊಲೀಸ್ ನಗರದ ಅಧಿಕಾರಿಗಳಲ್ಲಿ ವಿಚಾರಿಸಿದರೆ, ಕೊರೊನಾ ವೈರಸ್ನ ಭೀತಿ ವ್ಯಕ್ತಪಡಿಸುತ್ತಾರೆ. ಜತೆಗೆ ಪರಿಶೀಲಿಸುವ ಭರವಸೆ ನೀಡುತ್ತಾರೆ.
ಒಟ್ಟಾರೆ ಲಾಕ್ಡೌನ್ ಬಳಿಕ ತಣ್ಣಗಾಗಿದ್ದ ಭಿಕ್ಷಾಟನೆೆ ಮತ್ತೆ ಆರಂಭವಾಗಿದೆ. ಅದರಲ್ಲೂ ಹಸುಗೂಸುಗಳನ್ನು ಭಿಕ್ಷಾಟನೆಗೆ ಬಳಸಿಕೊಳ್ಳುವ ಜಾಲ ಮತ್ತೆ ಸಕ್ರಿಯವಾಗಿರುವುದರಿಂದಾಗಿ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ.