ಬೆಂಗಳೂರು : ಚುನಾವಣೆ ದಿನಾಂಕ ಘೋಷಣೆಗೂ ಮುನ್ನ ಚುನಾವಣಾ ಕಾರ್ಯಕ್ಕೆ ನಿಯೋಜನೆ ಮಾಡಿರುವ ಅಧಿಕಾರಿಗಳು ದಾಳಿ ನಡೆಸಿ ಯಾವುದೇ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲು ಅವಕಾಶವಿಲ್ಲ ಎಂದು ಹೈಕೋರ್ಟ್ ಹೇಳಿದೆ. ಅಲ್ಲದೆ, ಶಿವಾಜಿ ನಗರದಲ್ಲಿ ಬಡಜನತೆಗೆ ಹಂಚುವುದಕ್ಕಾಗಿ ಸಾಮಾಜಿಕ ಕಾರ್ಯಕರ್ತರೊಬ್ಬರು ಸಂಗ್ರಹಿಸಿದ್ದ ಅಕ್ಕಿಯ ಚೀಲಗಳನ್ನು ಹಿಂದಿರುಗಿಸಬೇಕು ಎಂದು ಸೂಚನೆ ನೀಡಿದೆ.
ಶಿವಾಜಿನಗರದ ನಿವಾಸಿ ಇಷ್ತಿಯಾಕ್ ಅಹ್ಮದ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ಧ ನ್ಯಾಯಪೀಠ ಈ ಸೂಚನೆ ನೀಡಿದೆ. ಚುನಾವಣೆ ಕಾರ್ಯಕ್ಕಾಗಿ ನಿಯೋಜನೆಗೊಂಡಿರುವ ಅಧಿಕಾರಿಗಳು ಚುನಾವಣಾ ದಿನಾಂಕ ಘೋಷಣೆಗೂ ಮುನ್ನ ದಾಳಿ ನಡೆಸುವುದು ಮತ್ತು ಯಾವುದೇ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳುವುದಕ್ಕೆ ಅವಕಾಶವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಅಲ್ಲದೆ, ಚುನಾವಣಾ ಅಧಿಕಾರಿಗಳಿಗೆ ಚುನಾವಣೆ ಘೋಷಣೆಯ ಬಳಿಕವೇ ಅಧಿಕಾರ ಸಿಗಲಿದೆ. ಆದರೆ, ಈ ಪ್ರಕರಣದಲ್ಲಿ ಚುನಾವಣಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ದಾಳಿ ಅಕ್ಕಿಯ ಚೀಲಗಳನ್ನು ವಶಕ್ಕೆ ಪಡೆದಿರುವುದು ಕಾನೂನು ಬಾಹಿರವಾಗಿದೆ. ಹೀಗಾಗಿ ವಶಪಡಿಸಿಕೊಂಡಿರುವ
ಅಕ್ಕಿಯ ಚೀಲಗಳನ್ನು ತಕ್ಷಣ ವಶಪಡಿಸಿಕೊಂಡಿರುವ ಅಕ್ಕಿ ಚೀಲಗಳನ್ನು ಬಿಡುಗಡೆ ಮಾಡಿದೆ. ಜೊತೆಗೆ, ಅರ್ಜಿದಾರರಿಗೆ ಚುನಾವಣೆ ಘೋಷಣೆಯಾಗಿರುವುದರಿಂದ ಯಾವುದೇ ರೀತಿಯ ನೀತಿ ಸಂಹಿತೆ ಉಲ್ಲಂಘನೆ ಮಾಡದಂತೆ ಮತ್ತು ಅಕ್ಕಿ ಸೇರಿದಂತೆ ಯಾವುದೇ ವಸ್ತುಗಳನ್ನು ವಿತರಿಸದಂತೆ ಮುಚ್ಚಳಿಕೆ (ಇಂಡೆಮ್ನಿಟಿ ಬಾಂಡ್)ಯನ್ನು ಹೈಕೋರ್ಟ್ ಪಡೆದುಕೊಂಡಿದೆ.
ಅಲ್ಲದೆ, ಅರ್ಜಿದಾರರು ಚುನಾವಣೆ ಮುಗಿರುವ ಮುನ್ನವೇ ಅಕ್ಕಿ ಸೆರಿದಂತೆ ಯಾವುದೇ ವಸ್ತುಗಳನ್ನು ವಿತರಣೆ ಮಾಡಿ ನೀತಿ ಸಂಹಿತೆ ಉಲ್ಲಂಘಿಸಿದಲ್ಲಿ ಚುನಾವಣಾಧಿಕಾರಿಗಳು ಕಾನೂನು ಪ್ರಕಾರ ಕ್ರಮ ಕೈಗೊಳ್ಳಬಹುದು ಎಂದು ನ್ಯಾಯಪೀಠ ತನ್ನ ಆದೇಶಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ:ಸಮಾಜ ಸೇವಕ ಎಂಬುದಾಗಿ ಹೇಳಿಕೊಂಡಿರುವ ಬೆಂಗಳೂರಿನ ಶಿವಾಜಿ ನಗರದ ನಿವಾಸಿ ಇಷ್ತಿಯಾಕ್ ಅಹಮದ್ ಅವರಿಂದ 2022 ರ ಮಾ.19 ರಂದು ಕಡು ಬಡವರಿಗೆ ಹಂಚುವುದಕ್ಕಾಗಿ 25 ಕೆ.ಜಿ ತೂಕದ 530 ಅಕ್ಕಿ ಚೀಲಗಳನ್ನು ಸಂಗ್ರಹಿಸಿದ್ದರು. ಚುನಾವಣಾ ಘೋಷಣೆ ಮಾಡುವುದಕ್ಕೂ ಮುನ್ನ ಚುನಾವಣ ಕಾರ್ಯಕ್ಕೆ ನಿಯೋಜನೆ ಗೊಂಡಿರುವ ಅಧಿಕಾರಿಗಳು ದಾಳಿ ನಡೆಸಿ ಅಕ್ಕಿ ಚೀಲಗಳನ್ನು ವಶಪಡಿಸಿಕೊಂಡಿದ್ದರು. ಈ ಸ್ಪಷ್ಟನೆ ನೀಡುವಂತೆ ನೋಟಿಸ್ ಜಾರಿ ಮಾಡಿದ್ದರು.
ಈ ಸಂಬಂಧ ಅರ್ಜಿದಾರರು ಕಳೆದ 15 ವರ್ಷಗಳಿಂದ ಬಡವರಿಗೆ ಹಬ್ಬ ಹರಿದಿನಗಳಲ್ಲಿ ಬಟ್ಟೆ ಮತ್ತು ಅಕ್ಕಿ ಸೇರಿದಂತೆ ಇತರೆ ಅಗತ್ಯ ವಸ್ತುಗಳು ವಿತರಣೆ ಮಾಡುವುದಕ್ಕೆ ಸಂಗ್ರಹಿಸಲಾಗಿತ್ತು ಎಂದು ತಿಳಿಸಿದ್ದರು. ಅಲ್ಲದೆ, ಈ ಸಂಬಂಧ ಖರೀದಿ ಮಾಡಿದ್ದ ರಶೀದಿಗಳನ್ನು ಸಲ್ಲಿಸಿದ್ದರು. ಆದರೂ ಚುನಾವಣೆಗೆ ನಿಯೋಜನೆಗೊಂಡಿದ್ದ ಅಧಿಕಾರಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಜೊತೆಗೆ ಅಕ್ಕಿಯ ಚೀಲಗಳನ್ನು ಹಿಂದಿರುಗಿರಿಸಿರಲಿಲ್ಲ. ಹೀಗಾಗಿ ಅಕ್ಕಿ ಚೀಲಗಳನ್ನು ಹಿಂದಿರುಗಿಸುವಂತೆ ಕೋರಿ ಇಷ್ತಿಯಾಕ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಘಟನೆ ನಡೆದ ಬಳಿಕ ಮಾರ್ಚ್ 29 ರಂದು ರಾಜ್ಯದಲ್ಲಿ ಚುನಾವಣಾ ದಿನಾಂಕ ಘೋಷಣೆ ಮಾಡಲಾಗಿತ್ತು.
ಇದನ್ನೂ ಓದಿ:ತನ್ನ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್ ಮೊರೆ ಹೋದ ಕಿಚ್ಚ ಸುದೀಪ್