ಬೆಂಗಳೂರು:ಬಿಬಿಎಂಪಿ ಕಡೆಯಿಂದ ಬೆಡ್ ಬ್ಲಾಕ್ ಮಾಡುವ ಸಾಫ್ಟ್ವೇರ್ ಹಳೆಯದಾಗಿದ್ದು, ದೋಷಪೂರಿತವಾಗಿದೆ. ಈ ಬಗ್ಗೆ ತಜ್ಞರ ಸಮಿತಿ ನೀಡುವ ವರದಿ ಆಧರಿಸಿ ಸಾಫ್ಟ್ವೇರ್ ಬದಲಾಯಿಸಲಾಗುವುದು. ಆರೋಪ ಕೇಳಿ ಬಂದಿರುವವರ ಬಗ್ಗೆ ಸೂಕ್ತ ತನಿಖೆ, ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳುವ ಮೂಲಕ ಬಿಬಿಎಂಪಿ ಮುಖ್ಯ ಆಯುಕ್ತರು ನುಣುಚಿಕೊಳ್ಳುವ ಯತ್ನ ನಡೆಸುತ್ತಿದ್ದಾರೆ.
ನಿನ್ನೆಯಷ್ಟೇ ನಗರದ ದಕ್ಷಿಣ ವಲಯದಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಬೆಡ್ಗಳು ಅಕ್ರಮವಾಗಿ ಬುಕ್ ಮಾಡುವ ಮೂಲಕ ನಡೆಸಿರುವ ಹಗರಣವನ್ನು ಸಂಸದ ತೇಜಸ್ವಿ ಸೂರ್ಯ ಹಾಗೂ ಸ್ಥಳೀಯ ಶಾಸಕರು ಬಯಲು ಮಾಡಿದ್ದಾರೆ. ಇದರಲ್ಲಿ ಏಜೆನ್ಸಿ ವತಿಯಿಂದ ಬಂದಿರುವ ಸಿಬ್ಬಂದಿ, ಆಸ್ಪತ್ರೆಗಳು ಹಾಗೂ ಪಾಲಿಕೆಯ ಉನ್ನತ ಅಧಿಕಾರಿಗಳ ಪಾತ್ರ ಇರುವ ಬಗ್ಗೆಯೂ ದೂರಿದ್ದಾರೆ. ಆದರೆ ಈವರೆಗೆ ಬಿಬಿಎಂಪಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದ್ದು, ಇಂದಿಗೂ ಐಸಿಯು, ವೆಂಟಿಲೇಟರ್ ಬೆಡ್ಗಳು ಜನಸಾಮಾನ್ಯರಿಗೆ ಸಿಗುತ್ತಿಲ್ಲ ಎಂಬ ಆರೋಪಗಳಿವೆ.
ಇನ್ನೊಂದೆಡೆ ಪೊಲೀಸ್ ಇಲಾಖೆಯಿಂದ ತನಿಖೆ ಚುರುಕು ಪಡೆದಿದೆ. ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಈವರೆಗೆ ನಾಲ್ವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ. ಒಂದು ಪ್ರಕರಣದಲ್ಲಿ ರೋಹಿತ್ ಕುಮಾರ್ ಹಾಗೂ ನೇತ್ರಾವತಿ, ಮತ್ತೊಂದು ಪ್ರಕರಣದಲ್ಲಿ ಬೊಮ್ಮನಹಳ್ಳಿ ವಲಯದ ಕೊರೊನಾ ವಾರ್ ರೂಂ ಇನ್ಚಾರ್ಜ್ ಡಾ.ಸುರೇಶ್, ಹಾಗೂ ದಕ್ಷಿಣ ವಲಯದ ವಾರ್ ರೂಂ ಇನ್ಚಾರ್ಜ್ ಡಾ.ರೆಹಾನ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಡಾ ಸುರೇಶ್ಗೆ ಕೋವಿಡ್ ಪಾಸಿಟಿವ್ ಹಿನ್ನೆಲೆ ಸದ್ಯ ಮನೆಯಲ್ಲಿಯೇ ಹೋಂ ಐಸೋಲೇಷನ್ ಆಗಿದ್ದಾರೆ. ಕೇವಲ ಒಂದೇ ವಲಯ ಅಲ್ಲದೆ, ಎಲ್ಲಾ ಎಂಟು ವಲಯಗಳ ಕೋವಿಡ್ ವಾರ್ ರೂಂನಲ್ಲಿ ಬೆಡ್ ಬುಕ್ಕಿಂಗ್ ದಂಧೆ ನಡೆಯುತ್ತಿದ್ದರೆ ತನಿಖೆ ನಡೆಸಬೇಕೆಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ.
ಇನ್ನು ಬೆಡ್ ದಂಧೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಈ ಪ್ರಕರಣದಲ್ಲಿ ನಿಗದಿತ 12 ಜನರ ಮೇಲಿನ ಆರೋಪದ ಬಗ್ಗೆ ದೂರು ಬಂದಿದೆ. ಈ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಹೆಚ್ಚಿನ ಮಾಹಿತಿಯೂ ಬೇಕಾಗಿದೆ. ನಂತರ ಅಕ್ರಮದ ಬಗ್ಗೆ ತಿಳಿಸಲು ಸಾಧ್ಯ ಎಂದರು.
ನಗರದಲ್ಲಿ ದಿನಕ್ಕೆ ಸುಮಾರು 800ರಿಂದ 1000 ಜನರಿಗೆ ಬೆಡ್ ನೀಡಲಾಗುತ್ತಿದೆ. ಕೆಲವು ಪ್ರಕರಣಗಳಲ್ಲಿ ಬೆಡ್ ನಿಗದಿಪಡಿಸಿದ ಕಡೆ ಜನರು ಹೋಗುವುದಿಲ್ಲ. ಮನೆಯ ಪಕ್ಕದ ಆಸ್ಪತ್ರೆಗೆ ದಾಖಲಾಗ್ತಾರೆ. ಆಗ ಬ್ಲಾಕ್ ಮಾಡಿದ ಬೆಡ್, ಅನ್ ಬ್ಲಾಕ್ ಮಾಡಿ, ಬೇರೆಯವರಿಗೆ ನೀಡಲಾಗುತ್ತದೆ. ಆದರೆ ಕೆಲವು ಪ್ರಕರಣಗಳಲ್ಲಿ ಅನ್ ಬ್ಲಾಕ್ ಮಾಡುವ ಕಡೆ ಅಕ್ರಮ ನಡೆದಿದೆ ಎಂದು ದೂರು ಬಂದಿದೆ. ಇದು ಎಲ್ಲೆಲ್ಲಿ ನಡೆಯುತ್ತಿದೆ ಎಂದು ಗುರುತು ಮಾಡಲಾಗುತ್ತಿದೆ ಎಂದು ತಿಳಿಸಿದರು.