ಕರ್ನಾಟಕ

karnataka

ETV Bharat / state

ಸರ್ಕಾರಿ ಕೋಟಾದ ಬೆಡ್​ಗಳ ದುರುಪಯೋಗ.. ಬೆಡ್ ಬುಕ್ಕಿಂಗ್ ದಂಧೆ ಬಹಿರಂಗಪಡಿಸಿದ ಸಂಸದ ತೇಜಸ್ವಿ ಸೂರ್ಯ - Bengaluru latest news

ರಾತ್ರಿ ಎರಡು ಮೂರು ಗಂಟೆಗೆಲ್ಲ ಬೆಡ್​ಗಾಗಿ ಜನ ಮನವಿ ಮಾಡುತ್ತಿದ್ದಾರೆ. ವಾರ್ ರೂಂಗೆ ಬಂದು ಐದು ಬೆಡ್ ಆದ್ರೂ ಕೊಡಿ ಅಂತ ಮನವಿ ಮಾಡಿದ್ರೂ ಬೆಡ್ ಸಿಗುತ್ತಿಲ್ಲ. ಅಲ್ಲಿನ ಕೆಲವು ಸಿಬ್ಬಂದಿ ಹಾಸಿಗೆಗಳ ಕೃತಕ ಅಭಾವ ಸೃಷ್ಟಿಸಿ ಜನರ ಜೀವದ ಜೊತೆ ಚೆಲ್ಲಾಟ ಆಡಿದ್ದಾರೆ. ಇಂಥಹ ಸಂದಿಗ್ಧ ಪರಿಸ್ಥಿತಿಯಲ್ಲೂ ಈ ರೀತಿ ಭ್ರಷ್ಟಾಚಾರ ನಡೆಸಿರುವುದು ಅಕ್ಷಮ್ಯ ಎಂದು ಸಂಸದ ತೇಜಸ್ವಿ ಸೂರ್ಯ ಕಿಡಿಕಾರಿದ್ದಾರೆ.

Bed blocking scam; MP Tejasvi Surya allegations on BBMP officers
ಬೆಡ್ ಬುಕ್ಕಿಂಗ್ ದಂಧೆ ಬಹಿರಂಗಪಡಿಸಿದ ಜನಪ್ರತಿನಿಧಿಗಳು

By

Published : May 4, 2021, 7:26 PM IST

Updated : May 6, 2021, 2:27 PM IST

ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ದಕ್ಷಿಣ ವಲಯದಲ್ಲಿ ಅಲ್ಲಿನ ವಾರ್ ರೂಂ ಅಧಿಕಾರಿಗಳು ಹಣ ಕೊಟ್ಟವರಿಗೆ ಮಾತ್ರ ಬೆಡ್​ ಬುಕ್​ ಮಾಡಿಕೊಡುವ ಮೂಲಕ ಭಾರಿ ಪ್ರಮಾಣದ ದಂಧೆ ನಡೆಸುತ್ತಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ, ಸ್ಥಳೀಯ ಶಾಸಕ ಸತೀಶ್ ರೆಡ್ಡಿ, ರವಿ ಸುಬ್ರಹ್ಮಣ್ಯ ಆರೋಪಿಸಿದ್ದಾರೆ.

ಬಿಬಿಎಂಪಿ ದಕ್ಷಿಣ ವಲಯದ ವಾರ್‌ ರೂಂಗೆ ಭೇಟಿ ನೀಡಿ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಅವರು, ಇದಕ್ಕೆ ಸಂಬಂಧಿಸಿದ ಆಡಿಯೋ ಹಾಗೂ ವಾಟ್ಸಾಪ್ ಮೆಸೇಜ್​​ಗಳ ದಾಖಲೆ ಒದಗಿಸಿದ್ದಾರೆ.

ಅಧಿಕಾರಿ ವರ್ಗ ಹಾಗೂ ಸಿಬ್ಬಂದಿಗೆ ತರಾಟೆ

ಇದನ್ನೂ ಓದಿ: ಆಮ್ಲಜನಕ ಕೊರತೆ, ಕೋವಿಡ್ ನಿಯಂತ್ರಣದಲ್ಲಿ ವೈಫಲ್ಯ: ಸರ್ಕಾರದ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್ ನಿರ್ಧಾರ

ಬಳಿಕ ಈ ದಂಧೆ ಕುರಿತು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ, ಪಾಸಿಟಿವ್ ಆಗಿ ಹೋಂ ಐಸೋಲೇಷನ್​ನಲ್ಲಿದ್ದವರ ಹೆಸರಿನಲ್ಲೂ ಬೆಡ್ ಬುಕ್ ಮಾಡುವ ಮೂಲಕ ಹಾಸಿಗೆ ಹಂಚಿಕೆಯಲ್ಲಿ ಭಾರಿ ಅವ್ಯವಹಾರ ನಡೆಸಿದ್ದಾರೆ. ಇಲ್ಲಿರುವ ದಾಖಲೆಗೂ ನಮಗೆ ಬಂದಿರುವ ಮಾಹಿತಿಗೂ ಯಾವುದೇ ತಾಳೆ ಆಗುತ್ತಿಲ್ಲ. ಪಾಲಿಕೆ ದಾಖಲೆಯಲ್ಲಿ ಅವರಿಗೆಲ್ಲ ಪಾಲಿಕೆ‌ ಕಡೆಯಿಂದಲೇ ಬೆಡ್ ಬುಕ್ ಮಾಡಲಾಗಿದೆ ಎಂದು ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ. ಇದೇ ದಾಖಲೆ ಇಟ್ಟುಕೊಂಡು ಬೆಡ್ ಬುಕ್ ಆದ ಕುಟುಂಬವನ್ನು ಸಂಪರ್ಕಿಸಿದರೆ ಅವರಿಗೆ ಈ ಮಾಹಿತಿಯೇ ಗೊತ್ತಿಲ್ಲ. ಕಳೆದ 15 ದಿನದಿಂದ ಜನರು ಆಸ್ಪತ್ರೆಯಲ್ಲಿ ಬೆಡ್​ಗಾಗಿ ಅಂಗಲಾಚುತ್ತಿದ್ದಾರೆ. ಇತ್ತ ಒಬ್ಬನೇ ವ್ಯಕ್ತಿಯ ಹೆಸರಿನಲ್ಲಿ 12 ಆಸ್ಪತ್ರೆಗಳಲ್ಲಿ ಹಾಸಿಗೆ ಕಾಯ್ದಿರಿಸಿದ್ದಾರೆ. ಇಂಥಹ ದಾರುಣ ಸಂದರ್ಭದಲ್ಲೂ ಈ ರೀತಿ ಭ್ರಷ್ಟಾಚಾರ ನಡೆಸಿರುವುದು ಅಕ್ಷಮ್ಯ. ಸಂಸದನಾಗಿ ನನಗೇ ಒಂದು ಬೆಡ್ ಕೊಡಿಸಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅಧಿಕಾರಿಗಳಿಂದಲೇ ಈ ಕೆಲಸ ನಡೆಯುತ್ತಿಲ್ಲ. ಇದರಲ್ಲಿ ಹಲವರು ಶಾಮೀಲಾಗಿದ್ದಾರೆ. ಅವರೆನ್ನೆಲ್ಲ ಜೈಲಿಗಟ್ಟುವುದಾಗಿ ಸಿಎಂ ತಿಳಿಸಿದ್ದಾರೆ. ಅದಲ್ಲದೆ ಬೆಡ್ ಬ್ಲಾಕ್ ಮಾಡದ ಹಾಗೆ ಸಾಫ್ಟ್​ವೇರ್ ಸಿದ್ಧವಾಗಿದೆ. ಪಾಲಿಕೆ ಅಧಿಕಾರಿಯೇ ಈ ಕೃತ್ಯ ಮಾಡಿದ್ದಾರೆ. ರಜಿನಾ ಸೋಫಿಯಾ ಎಂಬ ಅಧಿಕಾರಿಯಿಂದ ಈ ಕೃತ್ಯ ನಡೆದಿದೆ. ಬೆಡ್ ಬುಕ್ಕಿಂಗ್​ ಗೇ ಒಂದು ಏಜೆನ್ಸಿ ಇದ್ದು, ಅವರಿಗೆ ಬೇಕಾದವರಿಗಷ್ಟೇ ಬೆಡ್ ಬುಕ್ ಮಾಡಿಕೊಡುವ ದಂಧೆ ನಡೆಯುತ್ತಿದೆ ಎಂದು ಕಿಡಿಕಾರಿದರು.

ಸಂಸದ ತೇಜಸ್ವಿ ಸೂರ್ಯ ಮಾಧ್ಯಮಗೋಷ್ಠಿ

ಶಾಸಕ ಸತೀಶ್ ರೆಡ್ಡಿ ಮಾತನಾಡಿ, ಚಾಮರಾಜನಗರದ ಪ್ರಕರಣ ಬೆಂಗಳೂರಲ್ಲಿ ನಡೆಯಬಾರದು. ಐಸಿಯುಗೆ 60 ಸಾವಿರ ಹಣ ಕೇಳಿದ್ದಾರೆ. ಅಧಿಕಾರಿಗೆ ಹೇಳಿ ಮಾಡಿಸಿಕೊಡ್ತೀನಿ ಅಂತ ಡಿಮ್ಯಾಂಡ್ ಮಾಡಿದ್ದಾರೆ. ಈ ಹಗರಣಗಳು ಹೇಗೆ ನಡೆಯುತ್ತಿವೆ ಎಂದು ಪ್ರಶ್ನಿಸಿದರು.

ಕಾಲ್ ಸೆಂಟರ್​ಗಳಲ್ಲಿ ಅವರವರ ಸಂಬಂಧಿಕರೇ ಇದ್ದಾರೆ. ಈಗಾಗಲೇ ಕಂಟ್ರೋಲ್ ರೂಂ ಹಾಗೂ ಆರೋಗ್ಯ ಮಿತ್ರದಲ್ಲಿ ಇರುವವರ ದಂಧೆಯ ಬಗ್ಗೆ ಮಾಹಿತಿ ಕಲೆಹಾಕಲು ಸೂಚಿಸಲಾಗಿದೆ. ಡ್ರಗ್ ಆಫೀಸರ್​​ಗಳೇ ರೆಮ್​ಡಿಸಿವಿರ್​ ಮಾರಾಟ ಮಾಡುತ್ತಿದ್ದಾರೆ. 780 ವೆಂಟಿಲೇಟರ್​ಗಳು ಕೇಂದ್ರದಿಂದ ಬಂದಿವೆ. ಇನ್ನೂ 280 ವೆಂಟಿಲೇಟರ್​ಗಳು ಬಂದ ಮೇಲೆ ಕೊಡುತ್ತೇವೆ ಅಂತ ಒಬ್ಬರು ಐಎಎಸ್ ಅಧಿಕಾರಿ ತಿಳಿಸಿದ್ದಾರೆ. ಅಂದರೆ 780 ವೆಂಟಿಲೇಟರ್​ಗಳು ಇನ್ನೂ ಉಪಯೋಗ ಆಗದೆ ಹಾಗೇ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: ಚಾಮರಾಜನಗರ ಆಕ್ಸಿಜನ್ ದುರಂತಕ್ಕೆ ನೊಂದು ಸಿಎಂಗೆ ಭಾವನಾತ್ಮಕ ಪತ್ರ ಬರೆದ ರಮೇಶ್ ಕುಮಾರ್

ಶಾಸಕ ಉದಯ ಗರುಡಾಚಾರ್ ಮಾತನಾಡಿ, ರಾತ್ರಿ ಎರಡು ಮೂರು ಗಂಟೆಗೆಲ್ಲ ಬೆಡ್​ಗಾಗಿ ಜನ ಮನವಿ ಮಾಡುತ್ತಿದ್ದಾರೆ. ವಾರ್ ರೂಂಗೆ ಬಂದು ಐದು ಬೆಡ್ ಆದ್ರೂ ಕೊಡಿ ಅಂತ ಮನವಿ ಮಾಡಿದ್ರೂ ಬೆಡ್ ಸಿಗುತ್ತಿಲ್ಲ. ಅಲ್ಲಿನ ಕೆಲವು ಸಿಬ್ಬಂದಿ ಹಾಸಿಗೆಗಳ ಕೃತಕ ಅಭಾವ ಸೃಷ್ಟಿಸಿ ಜನರ ಜೀವದ ಜೊತೆ ಚೆಲ್ಲಾಟ ಆಡಿದ್ದಾರೆ ಎಂದು ಅರೋಪಿಸಿದರು.

Last Updated : May 6, 2021, 2:27 PM IST

ABOUT THE AUTHOR

...view details