ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಶುಕ್ರವಾರ ಸಾಲಮನ್ನಾ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದ ಅಧಿಕಾರಿಗಳು ಹಾಗೂ ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಶುಕ್ರವಾರ ಸಂಜೆ ನಡೆದ ಸಭೆಯಲ್ಲಿ 14 ಬ್ಯಾಂಕುಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಸಾಲಮನ್ನಾ ಯೋಜನೆಯಡಿ 4 ವರ್ಷಗಳಲ್ಲಿ ಹಂತ ಹಂತವಾಗಿ ಬ್ಯಾಂಕುಗಳಿಗೆ ಮೊತ್ತ ಪಾವತಿಸುವುದಾಗಿ ತಿಳಿಸಲಾಗಿತ್ತು. ಆದರೆ ಒಂದೇ ವರ್ಷದೊಳಗಾಗಿ ಎಲ್ಲ ಅರ್ಹ ಖಾತೆಗಳಿಗೆ ಸರ್ಕಾರದ ಮಾರ್ಗಸೂಚಿಯನ್ವಯ ಸಂಪೂರ್ಣ ಮೊತ್ತ ಪಾವತಿ ಮಾಡಲಾಗಿದೆ. ಆದ್ದರಿಂದ ರೈತರಿಗೆ ಮತ್ತೆ ಬೆಳೆ ಸಾಲ ಪಡೆಯಲು ಅವಕಾಶ ಕಲ್ಪಿಸಬೇಕು ಎಂದು ಮುಖ್ಯಮಂತ್ರಿಗಳು ಬ್ಯಾಂಕ್ ಪ್ರತಿನಿಧಿಗಳಿಗೆ ತಿಳಿಸಿದರು.
ಕಳೆದ 15 ವರ್ಷಗಳಲ್ಲಿ ಕರ್ನಾಟಕ 12 ವರ್ಷ ಬರ ಪರಿಸ್ಥಿತಿ ಎದುರಿಸಿದೆ. ರೈತರು ಬಹಳ ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಬ್ಯಾಂಕುಗಳು ರೈತರ ಬಗ್ಗೆ ಸ್ವಲ್ಪ ಮೃದು ಧೋರಣೆಯನ್ನು ಅನುಸರಿಸಬೇಕು ಎಂದು ಬ್ಯಾಂಕಿನ ಅಧಿಕಾರಿಗಳಿಗೆ ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಲೀಡ್ ಬ್ಯಾಂಕ್ ಮುಖ್ಯಸ್ಥರು, ಬ್ಯಾಂಕುಗಳು ರೈತರ ಬಗ್ಗೆ ಕಾಳಜಿ ವಹಿಸುತ್ತವೆ ಎಂದರು.
ಸಭೆ ಬಳಿಕ ಮಾಹಿತಿ ನೀಡಿದ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್, ರೈತರ ಖಾತೆಯಿಂದ ಹಣ ವಾಪಸ್ ಆಗಿದೆ ಅನ್ನುವ ಸುದ್ದಿ ಹಿನ್ನೆಲೆಯಲ್ಲಿ ಸಭೆ ಮಾಡಿದ್ದು, 13,123 ಪ್ರಕರಣಗಳಲ್ಲಿ ಬ್ಯಾಂಕುಗಳು ಖುದ್ದಾಗಿ ಪರಿಶೀಲಿಸಿ ಅನರ್ಹ ಖಾತೆಗಳನ್ನು ಪತ್ತೆ ಹಚ್ಚಿವೆ. ಹೀಗಾಗಿ ಆ ಖಾತೆಗಳಿಂದ ಹಣ ವಾಪಸ್ ಪಡೆದಿದ್ದಾರೆ. ಈ ಖಾತೆಗಳನ್ನು ಬ್ಯಾಂಕ್ನವರೇ ಪತ್ತೆ ಹಚ್ಚಿದ್ದಾರೆ. ಸುಮಾರು ₹ 59 ಕೋಟಿ ಹಣವನ್ನು ಬ್ಯಾಂಕ್ನವರೇ ಸರ್ಕಾರಕ್ಕೆ ವಾಪಸ್ ನೀಡಿದ್ದಾರೆ ಎಂದು ಹೇಳಿದರು.
ಎಲ್ಲೆಲ್ಲಿ ಸಾಲಮನ್ನಾ ಆಗಿಲ್ಲವೋ ಅಲ್ಲಿ ಬ್ಯಾಂಕ್ ಅಧಿಕಾರಿಗಳೇ ಹೋಗಿ ಪತ್ತೆ ಹಚ್ಚಿದ್ದಾರೆ. ಸಾಲಮನ್ನಾ ಆಗಿರುವ ರೈತರಿಗೆ ತಕ್ಷಣ ಬೆಳೆ ಸಾಲಮನ್ನಾಗೆ ಆದೇಶ ನೀಡಲಾಗಿದೆ. ವಾಣಿಜ್ಯ ಬ್ಯಾಂಕ್ ಸಾಲಮನ್ನಾದ ವಿವರ ಈ ರೀತಿ ಇದ್ದು, ರಾಜ್ಯದಲ್ಲಿ ಒಟ್ಟು 16.31 ಲಕ್ಷ ರೈತರ ಸಾಲ ಇದೆ. ಅದರಲ್ಲಿ 4 ಲಕ್ಷ ರೈತರು ಸಹಕಾರಿ ಬ್ಯಾಂಕ್ ಸಾಲದಲ್ಲಿ ಸೇರಿಕೊಂಡಿದ್ದಾರೆ ಎಂದು ಹೇಳಿದರು.
ಹೀಗಾಗಿ 12 ಲಕ್ಷ ರೈತರು ಮಾತ್ರ ವಾಣಿಜ್ಯ ಬ್ಯಾಂಕ್ ಸಾಲದ ವ್ಯಾಪ್ತಿಗೆ ಬರುತ್ತಾರೆ. ಅದರಲ್ಲಿ 1.60 ಲಕ್ಷ ರೈತರು ಇನ್ನು ಸರಿಯಾದ ದಾಖಲಾತಿ ಕೊಟ್ಟಿಲ್ಲ. ಹೀಗಾಗಿ ಅವರ ಸಾಲಮನ್ನಾ ಆಗಿಲ್ಲ. ಒಟ್ಟಾರೆ ₹ 27 ಸಾವಿರ ಕೋಟಿ ವಾಣಿಜ್ಯ ಬ್ಯಾಂಕ್ ಸಾಲ ಇದೆ. ಈ ಪೈಕಿ ₹ 5,297 ಕೋಟಿ ಬ್ಯಾಂಕ್ಗಳಿಗೆ ಬಿಡುಗಡೆಯಾಗಿದೆ. ಈಗ ಮತ್ತೆ ಎನ್ಪಿಎ ಅಕೌಂಟ್ನ ಒಂದು ಲಕ್ಷ ರೈತರ ಸಾಲಮನ್ನಾಕ್ಕಾಗಿ ₹ 960 ಕೋಟಿ ಬಿಡುಗಡೆಯಾಗಿದೆ. ಒಟ್ಟಾರೆ 8.5 ಲಕ್ಷ ರೈತರಿಗೆ ಸಾಲಮನ್ನಾ ಹಣ ಬಿಡುಗಡೆಯಾಗಿದೆ ಎಂದು ವಿಜಯ್ ಭಾಸ್ಕರ್ ವಿವರಿಸಿದರು.