ಬೆಂಗಳೂರು :ಅಪಾರ ನಷ್ಟ ಹಿನ್ನೆಲೆಯಲ್ಲಿ 7 ವರ್ಷಗಳ ಹಿಂದೆ ಗುತ್ತಿಗೆದಾರರು ಮೈಸೂರು ರಸ್ತೆಯ ಕಣ್ಮಿಣಿಕೆ ಹಂತ-1 ಯೋಜನೆ ಕೈಬಿಟ್ಟಿದ್ದರು. ಇದೀಗ ಮರುಜೀವ ನೀಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ. ಇತ್ತೀಚೆಗೆ ನಡೆದ ಬಿಡಿಎ ಆಡಳಿತ ಮಂಡಳಿ ಸಭೆಯಲ್ಲಿ ಯೋಜನೆಗೆ ಒಪ್ಪಿಗೆ ನೀಡಲಾಗಿದ್ದು, ಚುನಾವಣಾ ನೀತಿ ಸಂಹಿತೆ ತೆರವುಗೊಂಡ ಬಳಿಕ ಯೋಜನೆಗೆ ಗುತ್ತಿಗೆ ಕರೆಯಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ನಗರದಾದ್ಯಂತ ಪ್ರಾರಂಭವಾದ 167 ಕೋಟಿ ರೂ.ಗಳ ವಸತಿ ಯೋಜನೆಗಳ ಪೈಕಿ, ಈ ಯೋಜನೆಯೊಂದು ಹಳ್ಳ ಹಿಡಿದಿತ್ತು. ಯೋಜನೆಯಡಿಯಲ್ಲಿ ಒಟ್ಟು 608 1ಬಿ.ಹೆಚ್.ಕೆ, 384 2ಬಿಹೆಚ್ಕೆ ಮತ್ತು 320 3ಬಿಹೆಚ್ಕೆ ಫ್ಲಾಟ್‌ಗಳು ನಿರ್ಮಾಣವಾಗಬೇಕಿತ್ತು. ಗುತ್ತಿಗೆದಾರರಾದ ದೀಪಕ್ ಕೇಬಲ್ಸ್ ಅವರು ಈ ಯೋಜನೆಯನ್ನು ಡಿಸೆಂಬರ್ 2014 ರೊಳಗೆ ಪೂರ್ಣಗೊಳಿಸಬೇಕಿತ್ತು. ಆದರೆ 19 ಬ್ಲಾಕ್‌ಗಳ ಪೈಕಿ 7 ಬ್ಲಾಕ್‌ಗಳನ್ನು (ಪ್ರತಿ ಬ್ಲಾಕ್‌ಗೆ 40 ಫ್ಲಾಟ್‌ಗಳು) ಪೂರ್ಣಗೊಳಿಸಿದ್ದರು. ಎಲ್ಲವೂ 1 ಬಿ.ಹೆಚ್.ಕೆ ವರ್ಗದಲ್ಲಿವೆ ಎಂದು ಉನ್ನತ ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
1 ವರ್ಷದ ನಂತರ ಪ್ರತಿಕ್ರಿಯೆ:1 ವರ್ಷದ ನಂತರ ಮೇವರಿಕ್ ಹೋಲ್ಡಿಂಗ್ಸ್ ಹೊಸ ಟೆಂಡರ್‌ಗೆ ಪ್ರತಿಕ್ರಿಯೆ ನೀಡಿ ಯೋಜನೆ ಪೂರ್ಣಗೊಳಿಸಲು ಮುಂದೆ ಬಂದಿತ್ತು. ಆದರೆ, ಬಿಡಿಎ ಇದಕ್ಕೆ ಒಪ್ಪಿಗೆ ನೀಡಲಿಲ್ಲ ಎಂದು ಹೇಳಿದ್ದಾರೆ. ನಗರದಾದ್ಯಂತ ಹಲವಾರು ಫ್ಲಾಟ್‌ಗಳನ್ನು ಪೂರ್ಣಗೊಳಿಸಲಾಗಿದೆ. ಈ ಫ್ಲ್ಯಾಟ್ಗಳ ಮಾರಾಟಕ್ಕೆ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಆದರೇ ಕಣ್ಮಿನಿಕೆ ಹಂತ-2, 3 ಮತ್ತು 4ದ ಫ್ಲಾಟ್‌ಗಳ ಖರೀದಿಗೆ ಜನರು ಮುಂದೆ ಬರುತ್ತಿಲ್ಲ. ಈ ಫ್ಲ್ಯಾಟ್ಗಳ ಮಾರಾಟದತ್ತ ಗಮನಹರಿಸಲಾಗುತ್ತಿದೆ ಎಂದು ಬಿಡಿಎ ಅಧಿಕಾರಿ ತಿಳಿಸಿದ್ದಾರೆ.
ಬಿಡಿಎ ಕೋಟಿಗಟ್ಟಲೆ ನಷ್ಟ: ಸ್ಥಗಿತಗೊಂಡಿರುವ ಕಾಮಗಾರಿಯಿಂದಾಗಿ ಬಿಡಿಎ ಕೋಟಿಗಟ್ಟಲೆ ನಷ್ಟವನ್ನು ಅನುಭವಿಸಿದೆ. ಫ್ಲ್ಯಾಟ್ಗಳ ಮಾರಾಟ ಮಾಡಿ ಆದಾಯ ಗಳಿಸಬೇಕಿತ್ತು. ಜೊತೆಗೆ ಆಸ್ತಿ ತೆರಿಗೆಯನ್ನೂ ಸಂಗ್ರಹಿಸಬೇಕಿತ್ತು. ಹೀಗಾಗಿ ಫ್ಲ್ಯಾಟ್ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲು ನಿರ್ಧರಿಸಲಾಗಿದೆ ಎಂದು ಬಿಡಿಎ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ :ಪಿಎಸ್ಐ ಹಗರಣ: ಜೂನ್ 15ರ ಒಳಗೆ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ