ಬೆಂಗಳೂರು: ಕೊನೆಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಕ್ರಮ-ಸಕ್ರಮ ಯೋಜನೆಗೆ ಚಾಲನೆ ನೀಡಿದ್ದು, ಕಟ್ಟಡಗಳ ಸಕ್ರಮಕ್ಕೆ ಅರ್ಜಿ ಆಹ್ವಾನಿಸುವ ಮೂಲಕ ಯೋಜನೆಗೆ ಹಸಿರು ನಿಶಾನೆ ತೋರಿದೆ. ಈಗ ಆನ್‌ಲೈನ್ ಮುಖಾಂತರ ಅರ್ಜಿ ಆಹ್ವಾನಿಸಿದ್ದು, ಇದರಿಂದ ಬಿಡಿಎ ಬಡಾವಣೆಗಳಲ್ಲಿ ಕಟ್ಟಡ ನಿರ್ಮಿಸಿದವರಿಗೆ ಕೊಂಚ ರಿಲೀಫ್ ಸಿಗಲಿದೆ.
ಬಿಡಿಎ ಬಡಾವಣೆಗಳಲ್ಲಿ 12 ವರ್ಷಗಳ ಹಿಂದೆ ನಿಯಮ ಉಲ್ಲಂಘಿಸಿ ನಿರ್ಮಿಸಲಾದ ಕಟ್ಟಡ ಮಾಲೀಕರಿಗೆ ಈ ಅಕ್ರಮ-ಸಕ್ರಮ ಅನ್ವಯವಾಗಲಿದ್ದು, ಯಾರು ಬಿಲ್ಡಿಂಗ್ ಪ್ಲಾನ್ ಉಲ್ಲಂಘಿಸಿದ್ದಾರೋ ಅಂಥಹವರಿಗೆ ದಂಡ ಸಮೇತ ಸಕ್ರಮ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ನಿಗದಿತ ಅರ್ಜಿ ನಮೂನೆಯೊಂದಿಗೆ ಜಮೀನಿನ ಮೂಲ ಖಾತೆದಾರರಿಂದ ಖರೀದಿಸಲ್ಪಟ್ಟ ಕಂದಾಯ ನಿವೇಶನಗಳಲ್ಲಿನ ಕಟ್ಟಡದ ಕ್ರಯಪತ್ರಗಳ ದೃಢೀಕೃತ ಪ್ರತಿ, ಜಮೀನಿನ ಮೂಲ ಖಾತೆದಾರರಿಂದ ಖರೀದಿಸಲ್ಪಟ್ಟ ಕಂದಾಯ ನಿವೇಶನದಲ್ಲಿನ ಕಟ್ಟಡ ಕ್ರಯಪತ್ರಗಳ ಇತ್ತೀಚಿನವರೆಗಿನ ನಮೂನೆ-15ರಲ್ಲಿ ಮೂಲ ಋಣಭಾರ ಪ್ರಮಾಣಪತ್ರ, ನಿಗದಿತ ನಮೂನೆಯಲ್ಲಿ ಇತ್ತೀಚಿನ ಭಾವಚಿತ್ರ / ಮಾದರಿ ಸಹಿ ದೃಢೀಕರಣ ಪತ್ರ (ಗೆಜೆಟೆಡ್ ಅಧಿಕಾರಿಯ ದೃಢೀಕರಣ), ಸ್ವಪ್ರಮಾಣ ಪತ್ರ.
ಇತ್ತೀಚಿನ ಕಂದಾಯ ರಶೀದಿ, ಖಾತಾ ದೃಢೀಕರಣ ಪತ್ರ, ಖಾತಾ ನಕಲು ಪ್ರತಿ, ಮಂಜೂರಾದ ಕಟ್ಟಡದ ನಕ್ಷೆ, ನೀರಿನ ಸಂಪರ್ಕ ಕಾರ್ಯಾದೇಶ, ವಿದ್ಯುಚ್ಛಕ್ತಿ ಸಂಪರ್ಕ ಕಾರ್ಯಾದೇಶ, ವಾಸದ ವಿಳಾಸಕ್ಕೆ ಪುರಾವೆ (ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ಮತ್ತು ಇತರೆ) ಈ ಎಲ್ಲಾ ದಾಖಲಾತಿಗಳನ್ನು ನಿಗದಿತ ಶುಲ್ಕದೊಂದಿಗೆ ಕಡ್ಡಾಯವಾಗಿ ಆನ್‌ಲೈನ್ ಮುಖಾಂತರವೇ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.