ಬೆಂಗಳೂರು: ಬಿಡಿಎ ಅಧ್ಯಕ್ಷನಾಗಿ ಒಂದು ತಿಂಗಳು ಕಳೆಯುತ್ತಾ ಬಂತು, ಇಲ್ಲಿ ನಾನು ಅಂದುಕೊಂಡಂತೆ ಏನನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಯಶವಂತಪುರ ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎಸ್. ಟಿ. ಸೋಮಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ.
ಬಿಡಿಎ ಅಧ್ಯಕ್ಷನಾಗಿ ಅಂದುಕೊಂಡದ್ದೇನು ಮಾಡಲಾಗಿಲ್ಲ: ಎಸ್ ಟಿ ಸೋಮಶೇಖರ್ ಬೇಸರ - ಬೆಂಗಳೂರು
ಮಾಧ್ಯಮಗಳಲ್ಲಿ 40 ಕೋಟಿ ರೂಪಾಯಿ ಮೌಲ್ಯದ ಅವ್ಯವಹಾರ ಎಂದು ಬರುತ್ತಿದ್ದು, ಈ ಬಗ್ಗೆ ವಿವರ ಕೊಡಿ ಎಂದು ಲಿಖಿತರೂಪದಲ್ಲಿ ನಾನು ಕೇಳಿದ್ದೇನೆ ಇದಕ್ಕಿಂತ ಹೆಚ್ಚಿನದನ್ನು ನಾನು ಏನು ಮಾಡಲಿ ಎಂದು ಬಿಡಿಎ ಅಧ್ಯಕ್ಷ ಎಸ್ ಟಿ ಸೋಮಶೇಖರ್ ಪ್ರಶ್ನಿಸಿದ್ದಾರೆ.
ನಗರದ ಬಿಡಿಎ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಇಲ್ಲಿ ಅಭಿವೃದ್ಧಿ ಕೆಲಸ ಮಾಡುವುದಕ್ಕೆ ಅವಕಾಶ ಆಗುತ್ತಿಲ್ಲ. ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಎಲ್ಲದಕ್ಕೂ ತೊಡಕಾಗಿದ್ದಾರೆ. ಇಲ್ಲಿನ ಅವ್ಯವಹಾರಗಳ ಕುರಿತು ಸಾಕಷ್ಟು ಮಾಹಿತಿಯೊಂದಿಗೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನಾನು ಮತ್ತು ಶಾಸಕ ಭೈರತಿ ಬಸವರಾಜ್ ಒಟ್ಟಾಗಿ ತೆರಳಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೆವು, ಸಾಯಂಕಾಲದ ಒಳಗಡೆ ಸಮಸ್ಯೆ ಪರಿಹರಿಸುವುದಾಗಿ ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಜೊತೆ ಸಮಾಲೋಚಿಸಿದ ಬಳಿಕ ತಿಳಿಸಿದರು. ಆದರೆ ಒಂದು ವಾರ ಕಳೆದರೂ ಇದುವರೆಗೂ ಯಾವುದೇ ಪ್ರಗತಿ ಕಂಡುಬಂದಿಲ್ಲ ಎಂದರು.
ಸಾಕಷ್ಟು ಅವ್ಯವಹಾರ ಬಿಡಿಎನಲ್ಲಿ ನಡೆಯುತ್ತಿರುವುದು ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಇದುವರೆಗೂ ಆಯುಕ್ತರು ಉಪ ಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರು ಆಗಿರುವ ಪರಮೇಶ್ವರ್ ಅವರನ್ನು ಭೇಟಿ ಮಾಡಿ ಚರ್ಚಿಸುವ ಕಾರ್ಯ ಮಾಡಿಲ್ಲ. ಒಂದೆಡೆ ಬಿಡಿಎ ಮಾನ ಮರ್ಯಾದೆ ಹರಾಜು ಹಾಕುತ್ತಿರುವ ಕಾರ್ಯ ಆಗುತ್ತಿದ್ದರು ಆಯುಕ್ತರು ಈ ಬಗ್ಗೆ ಕಿಂಚಿತ್ ತಲೆಕೆಡಿಸಿಕೊಂಡಿಲ್ಲ. ಅಧ್ಯಕ್ಷನಾಗಿ ನಾನು ನನ್ನ ಕೈಯಲ್ಲಿ ಏನು ಮಾಡಲು ಸಾಧ್ಯ ಎಂಬುದನ್ನು ಗಮನಿಸಿ ಪರಮೇಶ್ವರ್ ಅವರನ್ನು ಭೇಟಿ ಮಾಡಿ ಮಾಹಿತಿ ನೀಡಿದ್ದೇನೆ ಎಂದು ವಿವರಿಸಿದರು.