ಬೆಂಗಳೂರು: ಬಿಡಿಎ ಆಲೂರಿನಲ್ಲಿ ನಿರ್ಮಾಣ ಮಾಡಿರುವ ಅಪಾರ್ಟ್ಮೆಂಟ್ಗೆ ಭೇಟಿ ನೀಡಿದ ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್, ಎಸ್ಟಿಪಿ ಘಟಕ ನಿರ್ಮಾಣಕ್ಕೆ 3.5 ಕೋಟಿ ರೂ. ಅನುದಾನ ಮಂಜೂರು ಮಾಡಲಾಗುತ್ತದೆ ಎಂದು ತಿಳಿಸಿದರು.
ಅಗತ್ಯ ಸಮರ್ಪಕ ಕುಡಿಯುವ ನೀರು, ಮೂಲಸೌಕರ್ಯಗಳನ್ನು ಆದ್ಯತೆ ಮೇಲೆ ಪೂರೈಸಲಾಗುತ್ತದೆ ಎಂದು ಎಸ್.ಆರ್. ವಿಶ್ವನಾಥ್ ಭರವಸೆ ನೀಡಿದ್ದಾರೆ. ಅಪಾರ್ಟ್ಮೆಂಟ್ಗೆ ಭೇಟಿ ನೀಡಿ ಅಲ್ಲಿನ ನಾಗರಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಮುಂದಿನ ವಾರ ನಡೆಯಲಿರುವ ಪ್ರಾಧಿಕಾರದ ಮಂಡಳಿ ಸಭೆಯಲ್ಲಿ ಮತ್ತು ಆಯುಕ್ತರ ಜತೆ ಚರ್ಚಿಸಿ ಎಸ್ಟಿಪಿ ಘಟಕ ನಿರ್ಮಾಣಕ್ಕೆ ಅಗತ್ಯವಿರುವ 3.5 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಲಾಗುತ್ತದೆ. ಎರಡು ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಕಾಮಗಾರಿಯನ್ನೂ ಆರಂಭಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಸಿಂಗಲ್ ಬೆಡ್ ರೂಂಗಳಿರುವ ಫ್ಲಾಟ್ಗಳಲ್ಲಿ ನೀರು ಸೋರಿಕೆ ಆಗುತ್ತಿರುವುದು, ಈ ಘಟಕಕ್ಕೆ ಕುಡಿಯುವ ನೀರಿನ ಅಲಭ್ಯತೆ ಸೇರಿದಂತೆ ಇನ್ನಿತರೆ ಸಮಸ್ಯೆಗಳನ್ನು ಆಲಿಸಿದ ಅವರು, ಕೂಡಲೇ ಪ್ರತಿಯೊಂದು ಫ್ಲಾಟ್ ಸಮುಚ್ಚಯಕ್ಕೂ ಓವರ್ ಹೆಡ್ ಸಿಂಟೆಕ್ಸ್ ಟ್ಯಾಂಕ್ ಅಳವಡಿಸುವಂತೆ ಬಿಡಿಎ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ:ಸಂಪುಟ ವಿಸ್ತರಣೆ, ಉಪ ಚುನಾವಣಾ ಅಭ್ಯರ್ಥಿ ಆಯ್ಕೆ ಕುರಿತು ವರಿಷ್ಠರ ಜೊತೆ ಚರ್ಚೆ: ಸಿಎಂ
ನೀರು ಸೋರಿಕೆಯನ್ನು ತಡೆಯುವ ನಿಟ್ಟಿನಲ್ಲಿ ಅಗತ್ಯ ದುರಸ್ತಿ ಕಾಮಗಾರಿಯನ್ನು ತಕ್ಷಣವೇ ಆರಂಭಿಸುವಂತೆ ಗುತ್ತಿಗೆದಾರರಿಗೆ ಆದೇಶ ನೀಡಿದರು. ಅಪಾರ್ಟ್ಮೆಂಟ್ನ ಒಂದು ಭಾಗದಲ್ಲಿ ರಕ್ಷಣಾ ಗೋಡೆ ನಿರ್ಮಾಣ ಮಾಡಲು ರೈತರೊಬ್ಬರು ತಕರಾರು ತೆಗೆದು, ಪ್ರಕರಣವನ್ನೂ ದಾಖಲಿಸಿದ್ದಾರೆ. ಈ ಬಗ್ಗೆ ನಿವಾಸಿಗಳು ಗಮನಕ್ಕೆ ತಂದಾಗ ತಕ್ಷಣವೇ ರೈತರನ್ನು ಕರೆದು ಗೋಡೆ ನಿರ್ಮಾಣ ಮಾಡಲು ಅವಕಾಶ ಮಾಡಿಕೊಡುವಂತೆ ಮನವೊಲಿಸಿದರು. ಇದಕ್ಕೆ ಸಮ್ಮತಿಸಿದ ರೈತರು ಜಂಟಿ ಸರ್ವೆ ನಡೆಸಿದ ನಂತರ ಭೂಮಿಯನ್ನು ಬಿಟ್ಟುಕೊಡುವುದಾಗಿ ವಾಗ್ದಾನ ಮಾಡಿದರು. ಈ ಹಿನ್ನೆಲೆಯಲ್ಲಿ ಒಂದು ವಾರದೊಳಗೆ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಜಂಟಿ ಸರ್ವೆ ನಡೆಸಿ ಗೋಡೆ ನಿರ್ಮಾಣ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಣ್ಣಿಗೆರೆ ವಸತಿ ನಿರ್ಮಾಣ ಯೋಜನೆಗೆ ಭೇಟಿ:
ಬಳಿಕ ವಣ್ಣಿಗೆರೆಯಲ್ಲಿ ಬಿಡಿಎ ನಿರ್ಮಾಣ ಮಾಡುತ್ತಿರುವ ಅಪಾರ್ಟ್ಮೆಂಟ್ಗಳು ಮತ್ತು ಇಂಡಿಪೆಂಡೆಂಟ್ ವಿಲ್ಲಾ ಕಾಮಗಾರಿಯನ್ನು ಪರಿಶೀಲಿಸಿದ ವಿಶ್ವನಾಥ್, ಇದೊಂದು ಬಿಡಿಎಯ ಮಹತ್ವಾಕಾಂಕ್ಷೆಯ ಮತ್ತು ಮಾದರಿ ಯೋಜನೆಯಾಗಿದೆ. ಆದಷ್ಟೂ ಬೇಗ ಕಾಮಗಾರಿಯನ್ನು ಪೂರ್ಣಗೊಳಿಸಿ ನಾಗರಿಕರಿಗೆ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.