ಬೆಂಗಳೂರು: ಇಂದು ಬಿಡಿಎ ಅಧಿಕಾರಿಗಳ ಜೊತೆ ಪ್ರಥಮ ಸಭೆ ನಡೆಸಿದ ಬಿಡಿಎ ನೂತನ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಬಿಡಿಎ ಕಾಮಗಾರಿಗಳಿಂದ ಯೋಜನೆಗಳ ಬಗ್ಗೆ ಮಾಹಿತಿ ಪಡೆದರು.
ಫೆರಿಪೆರಲ್ ರಿಂಗ್ ರಸ್ತೆ ನಿರ್ಮಾಣ ಯೋಜನೆಯ ಪಿಪಿಟಿ ಪ್ರೆಸೆಂಟೇಶನ್ಅನ್ನು ಅಧಿಕಾರಿಗಳು ಅಧ್ಯಕ್ಷರಿಗೆ ವಿವರಿಸಿದರು. ಪಿಆರ್ಆರ್ ಯೋಜನೆಗೆ ಹಣಕಾಸಿನ ವಿಚಾರದಲ್ಲಿ ತಡೆಯಾಗಿದ್ದು, ಅವರೇ ಮುಂದೆ ಹೋಗಿ ಈ ತೊಡಕುಗಳನ್ನು ನಿವಾರಣೆ ಮಾಡುವುದಾಗಿ ವಿಶ್ವನಾಥ್ ತಿಳಿಸಿದರು.
ಬಿಡಿಎ ಆಸ್ತಿ, ಸೈಟ್ಗಳ ವಿವರಗಳನ್ನು ಸಂಪೂರ್ಣವಾಗಿ ಡಿಜಿಟಲೈಸ್ ಮಾಡಲು ವೇಗ ನೀಡಲಾಗುವುದು. ಇದರಿಂದ ಸೈಟ್ ವಿಚಾರದಲ್ಲಿ ಯಾವುದೇ ಮೋಸ, ಒತ್ತುವರಿಯಾಗಲು ಸಾಧ್ಯವಿಲ್ಲ. ಡಿಜಿಟಲ್ ಆಗಿರುವ ಮಾಹಿತಿ ಅಧಿಕೃತವಾಗಿರಲಿದೆ ಎಂದರು. ಅರ್ಕಾವತಿ ಬಡಾವಣೆಯ 190 ಎಕರೆ ಜಾಗ ವಿವಾದದಲ್ಲಿದೆ. ಅಲ್ಲಿ ಸ್ಥಳ ಪರಿಶೀಲನೆಗೆ ಹೋಗಿ ರೈತರ ಜೊತೆ ಮಾತನಾಡಿ ಸಮಸ್ಯೆ ಇತ್ಯರ್ಥಪಡಿಸಲಾಗುವುದು ಎಂದರು.
ಕೆಂಪೇಗೌಡ ಬಡಾವಣೆಯಲ್ಲಿ 4 ಸಾವಿರ ಎಕರೆ ಜಾಗದಲ್ಲಿ ಕೇವಲ ಎರಡು ಸಾವಿರ ಎಕರೆ ಜಾಗ ಬಿಡಿಎಗೆ ಸಿಕ್ಕಿದೆ. ಮಿಕ್ಕೆಲ್ಲವು ಕೋರ್ಟ್ ಪ್ರಕರಣಗಳಿದ್ದು, ಈ ಬಗ್ಗೆಯೂ ಮಾಹಿತಿ ಪಡೆಯಲಾಗಿದೆ. ಶಿವರಾಮ ಕಾರಂತ ಬಡಾವಣೆಯ ಸಭೆಯನ್ನು ಮತ್ತೆ ಸೋಮವಾರ ಕರೆಯಲಾಗಿದೆ ಎಂದು ವಿಶ್ವನಾಥ್ ತಿಳಿಸಿದರು. ಒಟ್ಟಿನಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಬಿಡಿಎಯನ್ನು ಆರ್ಥಿಕವಾಗಿ ಸಬಲ ಮಾಡಲು ಯೋಜನೆಗಳಿಗೆ ವೇಗ ನೀಡಿ ಜನರಿಗೂ ಮೂಲ ಸೌಕರ್ಯ ಸೌಲಭ್ಯ ನೀಡುವುದಾಗಿ ಭರವಸೆ ನೀಡಿದ್ದಾರೆ.