ಬೆಂಗಳೂರು:ವಿಜಯೇಂದ್ರ ರಾಜಕೀಯವಾಗಿ ಬೆಳೆಯಬಾರದು ಅಂತ ಕುತಂತ್ರ ಹೂಡಲಾಗಿದೆ. ಇದಕ್ಕೆ ತಕ್ಕ ಉತ್ತರವನ್ನು ಎಲ್ಲಿ ಕೊಡಬೇಕು, ಯಾರಿಗೆ ಕೊಡಬೇಕು ಅಂತ ಗೊತ್ತಿದೆ. ನನಗೂ ಕೂಡಾ ರಾಜಕೀಯವಾಗಿ ಬೆಳೆಯುತ್ತಿರುವ ಸಂದರ್ಭ ಇದು. ಈ ತರಹದ ಸವಾಲುಗಳು ಬಂದಾಗ ನಮಗೂ ಬೆಳೆಯೋಕೆ ಸುಲಭ. ಈ ಸವಾಲುಗಳನ್ನು ಬಹಳ ಸಂತೋಷದಿಂದ ಎದುರಿಸುತ್ತೇನೆ. ಎಷ್ಟೇ ಕೇಸ್ ಹಾಕಿದರೂ ಎದುರಿಸುತ್ತೇವೆ, ತಲೆ ಕೆಡಿಸಿಕೊಳ್ಳಲ್ಲ ಎಂದು ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಬಿಡಿಎ ವಸತಿ ಯೋಜನೆ ಅಕ್ರಮ ಆರೋಪದ ಬಗ್ಗೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಪೊಲೀಸ್ ಠಾಣೆಯಲ್ಲಿ ತನಿಖೆ ಆಗಿದೆ. ಎಸಿಬಿಯಲ್ಲಿ ಇದೇ ಅಬ್ರಹಾಂ ದೂರು ಕೊಟ್ಟಿದ್ದರು. ರಾಜ್ಯಪಾಲರಿಗೆ ಸ್ಯಾಂಕ್ಷನ್ ಕೇಳಿದಾಗ ರಿಜೆಕ್ಟ್ ಆಗಿತ್ತು. ಯಡಿಯೂರಪ್ಪ ಮೇಲಿನ ಆರೋಪದಲ್ಲಿ ಶೇ 0.1 ಸತ್ಯವೂ ಇಲ್ಲ. ನಾವು ಹೆದರಿ ಓಡಿ ಹೋಗಲ್ಲ. 30 ಕೇಸ್ ಈಗಾಗಲೇ ಎದುರಿಸಿದ್ದೇವೆ, ಇದು 31 ನೇ ಕೇಸ್. ಯಾವನಿಗೂ ಹೆದರಿ ಓಡಿ ಹೋಗುವ ಪ್ರಶ್ನೆ ಉದ್ಭವ ಆಗಲ್ಲ ಎಂದು ತಿಳಿಸಿದರು.
ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸುವ ಪ್ರಯತ್ನ ಮಾಡಿದ್ದರು. ಆದರೂ ಅವರು ರಾಜ್ಯದ ಮುಖ್ಯಮಂತ್ರಿ ಆಗುವುದನ್ನು ಯಾರಿಂದಲೂ ತಪ್ಪಿಸೋಕೆ ಆಗಿರಲಿಲ್ಲ. ರಾಜಕೀಯ ವಿರೋಧಿಗಳು ಏನೇ ಷಡ್ಯಂತರ ಮಾಡಿದರೂ ಯಶಸ್ವಿ ಆಗಿಲ್ಲ. ಮುಂದೆಯೂ ಕೂಡಾ ವಿರೋಧಿಗಳು ಯಶಸ್ವಿಯಾಗಲ್ಲ. ರಾಜಕೀಯ ವಿರೋಧಿಗಳ ಷಡ್ಯಂತರ ಮೆಟ್ಟಿನಿಲ್ಲುವ ತಾಕತ್ತು ನನಗೆ ಇದೆ ಎಂದರು.
ರಾಜಕೀಯ ಕೈವಾಡ :ರಾಜಕೀಯ ವಿರೋಧಿಗಳೆಲ್ಲರ ಕೈವಾಡ ಇದರಲ್ಲಿದೆ. ಬಿಜೆಪಿಯವರ ಕೈವಾಡ ಇದೆ ಅಂತ ನಾನು ಹೇಳುತ್ತಿಲ್ಲ. ನಮ್ಮ ವಿರುದ್ಧ ರಾಜಕೀಯ ವಿರೋಧಿಗಳು ಷಡ್ಯಂತ್ರ ಮಾಡಿದ್ದಾರೆ. ಆ ರಾಜಕೀಯ ವಿರೋಧಿಗಳು ಪಕ್ಷದವರಾ? ಹೊರಗಿನವರಾ? ಅಂತ ಹೇಳಲ್ಲ. ಅವರು ರಾಜಕೀಯ ವಿರೋಧಿಗಳು ಅಂತ ಮಾತ್ರ ಹೇಳುತ್ತೇನೆ. ನೀವೇ ಅರ್ಥ ಮಾಡಿಕೊಳ್ಳಿ ಎಂದು ಸೂಚ್ಯವಾಗಿ ತಿಳಿಸಿದರು.
ಯತ್ನಾಳ್ ಪಕ್ಷಕ್ಕೂ ಡ್ಯಾಮೇಜ್ ಮಾಡುತ್ತಿದ್ದಾರೆ:ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡಲು ವಿಜಯೇಂದ್ರ ಅಡ್ಡಿ ಎಂಬ ಯತ್ನಾಳ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪಂಚಮಸಾಲಿ ಸಮುದಾಯದ ದಿಕ್ಕು ತಪ್ಪಿಸುವ ಯತ್ನ ನಡೀತಿದೆ. ಸಮಾಜ ಒಡೆಯುವ ಕೆಲಸವನ್ನು ರಾಜಕೀಯ ವಿರೋಧಿಗಳು ಮಾಡುತ್ತಿದ್ದಾರೆ. ಪದೇ ಪದೆ ಆ ತರದ ಹೇಳಿಕೆಗಳನ್ನು ನೀಡುವ ಮೂಲಕ ಯತ್ನಾಳ್ ಪಕ್ಷಕ್ಕೂ ಡ್ಯಾಮೇಜ್ ಮಾಡುತ್ತಿದ್ದಾರೆ ಎಂದರು.