ಬೆಂಗಳೂರು: ಬೆಂಗಳೂರು ಪೆರಿಫೆರೆಲ್ ರಿಂಗ್ ರಸ್ತೆ ಯೋಜನೆ ಇನ್ನೂ ಕಾಗದದ ಮೇಲಿನ ಘೋಷಣೆಯಾಗೇ ಉಳಿದಿದೆಯೇ ಹೊರತು ಕಾರ್ಯರೂಪಕ್ಕೆ ಬರುವ ಲಕ್ಷಣ ಕಾಣುತ್ತಿಲ್ಲ. ಈ ಯೋಜನೆಗಾಗಿ ಟೆಂಡರ್ ಪ್ರಕ್ರಿಯೆಯಲ್ಲೇ ಕಾಲಹರಣವಾಗುತ್ತಿದೆ.
ಬೆಂಗಳೂರು ಪೆರಿಫರೆಲ್ ರಿಂಗ್ ರಸ್ತೆ ಯೋಜನೆ ನಗರದ ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡುವ ಯೋಜನೆಯಾಗಿದೆ. ಈ ಯೋಜನೆ 2006ರಲ್ಲೇ ಘೋಷಣೆಯಾಗಿತ್ತು. ಆದರೆ, ಭೂ ಸ್ವಾಧೀನ ಪ್ರಕ್ರಿಯೆ, ಪರಿಸರ ಇಲಾಖೆ ಅನುಮತಿಯಲ್ಲಿನ ವಿಳಂಬದಿಂದ ಕಾರ್ಯರೂಪಕ್ಕೆ ಬರಲು ಇನ್ನೂ ಸಾಧ್ಯವಾಗಿಲ್ಲ. ಸುಪ್ರೀಂಕೋರ್ಟ್ ಯೋಜನೆ ಸಂಬಂಧ ಭೂ ಸ್ವಾಧೀನಕ್ಕೆ ಹಸಿರು ನಿಶಾನೆ ತೋರಿರುವುದರಿಂದ ಬಿಡಿಎ ನಿಟ್ಟುಸಿರು ಬಿಡುವಂತಾಗಿದೆ. ಇದರ ಜೊತೆಗೆ ಸಂಪುಟ ಸಭೆಯೂ ಯೋಜನೆಗೆ ಅನುಮೋದನೆ ನೀಡಿದೆ. ಆದರೆ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಪೆರಿಫರೆಲ್ ರಿಂಗ್ ರಸ್ತೆ ಯೋಜನೆಗೆ ಇನ್ನೂ ಕಾಯಕಲ್ಪ ಸಿಗುವ ಲಕ್ಷಣ ಕಾಣುತ್ತಿಲ್ಲ.
ಸುಮಾರು 21,091 ಕೋಟಿ ರೂ. ವೆಚ್ಚದಲ್ಲಿ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಸರ್ಕಾರ ಮುಂದಾಗಿದೆ. ಭೂ ಸ್ವಾಧೀನಕ್ಕೆ ಸುಮಾರು 15,475 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಇನ್ನು ಕಾಮಗಾರಿಗಾಗಿ 5,616 ಕೋಟಿ ರೂ. ಅಂದಾಜಿಸಲಾಗಿದೆ. ಇದೀಗ ಬೆಲೆ ಏರಿಕೆ ಹಿನ್ನೆಲೆ ಯೋಜನೆಯ ಅಂದಾಜು ವೆಚ್ಚದಲ್ಲಿ ಇನ್ನಷ್ಟು ಹೆಚ್ಚಳವಾಗಲಿದೆ.
ಟೆಂಡರ್ ಪ್ರಕ್ರಿಯೆಯಲ್ಲೇ ಕಾಲಹರಣ:ಅನೇಕ ವಿಘ್ನಗಳ ಬಳಿಕ ಕೊನೆಗೂ ಬಿಡಿಎ ಇದೇ ಏಪ್ರಿಲ್ 18 ರಂದು ಎಂಟು ಪಥದ ಈ ಯೋಜನೆಗೆ ಬಿಡ್ ಆಹ್ವಾನಿಸಿತ್ತು. ಅಲ್ಲಿಗೆ ಯೋಜನೆ ಜಾರಿಯ ಆರಂಭಿಕ ಪ್ರಕ್ರಿಯೆ ಆರಂಭಗೊಳ್ತು ಅಂದುಕೊಂಡರೆ, ಮತ್ತೆ ಪ್ರಕ್ರಿಯೆಗೆ ಅಡ್ಡಿ ಉಂಟಾಗಿದೆ. ಜೂನ್ 6ಕ್ಕೆ ಬಿಡ್ ಅವಧಿ ಮುಕ್ತಾಯವಾಗಿತ್ತು. ಆದರೆ, ಬಿಡ್ ಹಾಕಿದ್ದ ಟೆಂಡರ್ ಕಂಪನಿಗಳು ಹೆಚ್ಚುವರಿ ಸಮಯಾವಕಾಶ ಕೋರುತ್ತಿವೆ.
ಬಿಡ್ನಲ್ಲಿ ಒಟ್ಟು 8 ಕಂಪನಿಗಳು ಭಾಗವಹಿಸಿದ್ದವು. ಇದರಲ್ಲಿ ಅದಾನಿ ಕಂಪನಿಯೂ ಒಂದಾಗಿದೆ. ಆದರೆ, ಕಾರ್ಯಸಾಧು ವರದಿ ತಯಾರಿಸಲು ಇನ್ನೂ 45 ಹೆಚ್ಚುವರಿ ಕಾಲಾವಕಾಶ ಬೇಕು ಎಂದು ಕಂಪನಿಗಳು ಬಿಡಿಎಗೆ ಒತ್ತಾಯಿಸಿವೆ. ಪೆರಿಫೆರೆಲ್ ರಿಂಗ್ ರಸ್ತೆ ಯೋಜನೆಯ ವಿನ್ಯಾಸ, ಸರ್ವೆ ಕಾರ್ಯಕ್ಕಾಗಿ ಹೆಚ್ಚಿನ ಸಮಯಾವಕಾಶ ಬೇಕೆಂದು ಒತ್ತಾಯಿಸಿವೆ. ಹೀಗಾಗಿ, ಮತ್ತೆ ಸರ್ಕಾರಕ್ಕೆ ಪತ್ರ ಬರೆದು ರಿ-ಟೆಂಡರ್ ಕರೆಯಲು ಅವಕಾಶ ನೀಡುವಂತೆ ಮನವಿ ಮಾಡಲು ನಿರ್ಧರಿಸಿದ್ದೇವೆ ಎಂದು ಬಿಡಿಎ ಆಯುಕ್ತ ರಾಜೇಶ್ ಗೌಡ ತಿಳಿಸಿದ್ದಾರೆ.
ಆ ಮೂಲಕ ಮತ್ತೆ ಕಂಪನಿಗಳು ತಮ್ಮ ಬಿಡ್ ಪೂರ್ವ ಕಾರ್ಯಸಾಧು ವರದಿ ಆಧಾರದಲ್ಲಿ ಟೆಂಡರ್ ಹಾಕಲು ಅವಕಾಶ ಕಲ್ಪಿಸಲು ಮುಂದಾಗಿದೆ. ಹೀಗಾಗಿ ಮತ್ತೆ ಟೆಂಡರ್ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗಲಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ. ಈ ಎಲ್ಲಾ ಪ್ರಕ್ರಿಯೆ ಮುಗಿಯಲು ಇನ್ನೂ ಸುಮಾರು ಒಂದು ವರ್ಷಗಳ ಸಮಯಬೇಕಾಗಬಹುದು ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.
ಭೂ ಸ್ವಾದೀನ, ಪರಿಹಾರದ ತಲೆನೋವು:ಪೆರಿಫರೆಲ್ ರಿಂಗ್ ರಸ್ತೆಯನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಅನುಷ್ಠಾನ ಮಾಡಲು ಬಿಡಿಎಗೆ ನಿರ್ದೇಶಿಸಲಾಗಿದೆ. ಅದರಂತೆ ಮೇ 5, 2021ರಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಕಾಮಗಾರಿಗೆ ಭೂಸ್ವಾಧೀನ ವೆಚ್ಚವನ್ನು ಭರಿಸಿ ರಸ್ತೆ ನಿರ್ಮಾಣ ಮಾಡಲು ಪಿಪಿಪಿ Design Built Finance Operate & Transfer (DBFOT) ಮಾದರಿಯಲ್ಲಿ ಜಾಗತಿಕ ಟೆಂಡರ್ ಕರೆದಿದೆ. ಯೋಜನೆಗೆ ವಿಸ್ತ್ರತ ಯೋಜನಾ ವರದಿ ಹಾಗೂ Model Concession agreement ಸಿದ್ಧಪಡಿಸಿ 31.08.2021ರಂದು ಸರ್ಕಾರದ ಅನುಮೋದನೆಗಾಗಿ ಸಲ್ಲಿಸಲಾಗಿತ್ತು. ಪೆರಿಫೆರೆಲ್ ರಿಂಗ್ ರಸ್ತೆ ಯೋಜನೆ ಭಾಗ-1ಕ್ಕೆ 2007ರಲ್ಲಿ 1810 ಎಕರೆ 18.5 ಗುಂಟೆ ವಿಸ್ತೀರ್ಣದ ಜಮೀನಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ.
ಅದರ ಜೊತೆಗೆ ನೈಸ್ ಇಂಟಿಗ್ರೇಷನ್ ತುಮಕೂರು ರಸ್ತೆ, ನೈಸ್ ಇಂಟಿಗ್ರೇಷನ್ ಹೊಸೂರು ರಸ್ತೆ, ಟೋಲ್ ಪ್ಲಾಜಾ, ಕ್ಲೋವರ್ ಲೀಫ್, ಪೆಟ್ರೋನೆಟ್, ಸೀಗೇಹಳ್ಳಿ, ಮಿಸ್ಸಿಂಗ್ ಲಿಂಕ್‌ಗಳಿಗೆ ಹೆಚ್ಚುವರಿ ಜಮೀನು ಅವಶ್ಯವಿದೆ. ಇದಕ್ಕಾಗಿ ಅವಶ್ಯವಿರುವ 589 ಎಕರೆ 13.75 ಗುಂಟೆ ವಿಸ್ತೀರ್ಣಕ್ಕೆ ಪ್ರಾರಂಭಿಕ ಅಧಿಸೂಚನೆ ಹೊರಡಿಸುವ ಸಂಬಂಧ ಬಿಡಿಎ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಗೆ ಸಂಪುಟ ಸಭೆ ಅಸ್ತು ಅಂದಿದೆ.
ಸದ್ಯ ಕಾಚಮಾರನಹಳ್ಳಿ ಗ್ರಾಮದ ಸರ್ವೆ ನಂ. 100ರಲ್ಲಿ 1.28 ಎಕರೆ ಜಮೀನಿಗೆ 21.27 ಲಕ್ಷ ರೂ.ಗೆ ಐತೀರ್ಪ ಅನುಮೋದನೆಯಾಗಿದ್ದು, 2011ರಲ್ಲಿ ಭೂಸ್ವಾಧೀನ ಪಡೆದು ಅಭಿಯಂತರರ ಶಾಖೆಗೆ ಹಸ್ತಾಂತರಿಸಲಾಗಿದೆ. ಆದೂರು ಗ್ರಾಮದ ಸರ್ವೆ ನಂ 25/6 ರಲ್ಲಿ 28 ಗುಂಟೆ ಜಮೀನಿಗೆ 8.15 ಲಕ್ಷ ರೂ.ಗೆ ಐ ತೀರ್ಪು ಅನುಮೋದನೆಯಾಗಿದ್ದು, 2011 ರಂದು ಭೂಸ್ವಾಧೀನ ಪಡೆದು ಅಭಿಯಂತರರ ಶಾಖೆಗೆ ಹಸ್ತಾಂತರಿಸಲಾಗಿದೆ. ಆದೂರು ಗ್ರಾಮದ ಸರ್ವೆ ನಂ.32/10 ರಲ್ಲಿ 1.04 ಎಕರೆ ಜಮೀನಿಗೆ 11.78 ಲಕ್ಷ ರೂ.ಗೆ ಐ ತೀರ್ಪು ಅನುಮೋದನೆಯಾಗಿದ್ದು, 2011ರಂದು ಭೂ ಸ್ವಾಧೀನ ಪಡೆದು ಅಭಿಯಂತರರ ಶಾಖೆಗೆ ಹಸ್ತಾಂತರಿಸಲಾಗಿದೆ. ಉಳಿದಂತೆ ಟೆಂಡರ್ ಪಡೆಯುವ ಸಂಸ್ಥೆಯೇ ಭೂ ಸ್ವಾಧೀನ ಮಾಡುವ ಹಾಗೂ ಪರಿಹಾರ ನೀಡುವ ಹೊಣೆಗಾರಿಕೆ ಹೊಂದಿದೆ.
ಸುಪ್ರೀಂ ಕೋರ್ಟ್ ಮಾರ್ಗಸೂಚಿಯನ್ವಯ ಹಳೆ ದರದಲ್ಲೇ ರೈತರಿಗೆ ಭೂ ಪರಿಹಾರ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಸಂಬಂಧ ಇನ್ನಷ್ಟು ಮಾತುಕತೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ರೈತರು ಹೊಸ ಭೂ ಸುಧಾರಣೆ ಕಾಯ್ದೆಯ ದರದಲ್ಲೇ ಭೂ ಪರಿಹಾರ ನೀಡುವಂತೆ ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ ನಾಯಕರಿಗೆ ಪಂಚ ಪ್ರಶ್ನೆ ಕೇಳಿದ ಸಿ. ಟಿ ರವಿ