ಬೆಂಗಳೂರು: ಕಳಪೆ ರಾಸಾಯನಿಕ ಗೊಬ್ಬರ, ಬಿತ್ತನೆ ಬೀಜ ವಿತರಣೆ ಮಾಡಿದ್ದು ಕಂಡು ಬಂದರೆ, ಅಂಥವರ ಲೈಸನ್ಸ್ ರದ್ದು ಮಾಡಲಾಗುತ್ತದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರು ನಗರ ವ್ಯಾಪ್ತಿಯ ಸಭೆ ನಡೆಸಿದ್ದೇನೆ. ಲಾಕ್ ಡೌನ್ ನಿಂದಾಗಿ ಎಲ್ಲ ತರಕಾರಿಗಳ ಬೆಲೆ ಇಳಿದಿದೆ. ಬೆಳೆಯಲ್ಲೂ ಭಾರೀ ಕಡಿಮೆಯಾಗಿದೆ. ಹೂವು, ತರಕಾರಿ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಪಾಲಿ ಹೌಸ್ಗೆ ವಿಧಿಸುತ್ತಿರುವ ವಿದ್ಯುತ್ ಬಿಲ್ ಮನ್ನಾ ಮಾಡಲು ಬೇಡಿಕೆ ಬಂದಿದೆ. ಸಿಎಂ ಜತೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ. ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗಬಾರದು, ಕಳಪೆ ಗುಣಮಟ್ಟ ಬೀಜ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ವಿಜಿಲೆನ್ಸ್ ಟೀಂ ಕಾರ್ಯನಿರ್ವಹಣೆ ಮಾಡಲಿದೆ. ಕಳಪೆ ರಾಸಾಯನಿಕ ವಸ್ತುಗಳು, ಬಿತ್ತನೆ ಬೀಜ ವಿತರಣೆ ಮಾಡಬಾರದು. ಒಂದು ವೇಳೆ ಸಿಕ್ಕಿ ಬಿದ್ದರೆ ಲೈಸನ್ಸ್ ರದ್ದು ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.