ಬೆಂಗಳೂರು: ಜಗತ್ತಿನಲ್ಲಿ ಪ್ರಸ್ತುತ ಬದಲಾವಣೆಗಳ ವೇಗ ಹೆಚ್ಚಾಗಿದೆ. ಕೋವಿಡ್ ಸಾಂಕ್ರಾಮಿಕದ ನಂತರ ಗಮನಾರ್ಹ ಬದಲಾವಣೆಗಳ ಸ್ಥಿತಿಯಲ್ಲಿದ್ದೇವೆ. ಇದು ನಾಲ್ಕು ಪಟ್ಟು ಹೆಚ್ಚು ಸವಾಲುಗಳನ್ನು ಉತ್ಪಾದನಾ ಕ್ಷೇತ್ರದಲ್ಲಿ ನಮಗೆ ಒಡ್ಡಿದೆಯಾದರೂ, ಅಷ್ಟೇ ಅವಕಾಶಗಳೂ ಸಹ ಸೃಷ್ಟಿಯಾಗಿವೆ ಎಂದು ಕರ್ನಾಟಕ ಸರ್ಕಾರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ನಿರ್ದೇಶಕಿ ಹಾಗೂ ಕೈಗಾರಿಕಾ ಅಭಿವೃದ್ಧಿ ಆಯುಕ್ತೆ ಗುಂಜನ್ ಕೃಷ್ಣ ಹೇಳಿದರು.
ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನದ ಹೆಚ್ಚಳದ ಕಡೆಗೆ ಗಮನಹರಿಸಬೇಕಾದ ಅಗತ್ಯವಿದೆ. ನಮ್ಮ ಉತ್ಪಾದನಾ ಪ್ರಕ್ರಿಯೆಗಳು ಪರಿಸರದ ಮೇಲೆ ಉಂಟುಮಾಡುವತಹ ಪರಿಣಾಮ ಕಡಿಮೆ ಮಾಡಬೇಕಾದ ಅಗತ್ಯ ಕೂಡ ನಮಗಿದೆ. ಜಾಗತಿಕ ಅನಿಶ್ಚಿತತೆಯ ನಡುವೆ ಜಾಗತಿಕ ರಾಜಕೀಯ ಬೆಳವಣಿಗೆಗಳನ್ನು ನಿಭಾಯಿಸುವುದು ಮತ್ತು ಅವಕಾಶಗಳನ್ನು ಸ್ವಾಧೀನಪಡಿಸಿಕೊಳ್ಳುವುದು ಎರಡನೇಯ ಸವಾಲು. ಪ್ರಸ್ತುತ ಬಹಳಷ್ಟು ಹೂಡಿಕೆ ಆಗ್ನೇಯ ಏಷ್ಯಾದ ಕಡೆ ಬರುತ್ತದೆ. ಈ ಅವಕಾಶಗಳನ್ನು ಬಳಸಿಕೊಳ್ಳಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುವುದು ಅಗತ್ಯ ಎಂದರು.
ಮೂರನೇಯ ಸವಾಲು ಜಾಗತಿಕ ಉತ್ಪಾದನೆಯಲ್ಲಿ ಕೃತಕ ಬುದ್ಧಿವಂತಿಕೆ ಬಳಕೆಯನ್ನು ಹೆಚ್ಚಿಸುವುದಾಗಿದೆ. ಮುಂದುವರಿದ ದೇಶಗಳು ರೋಬೋಟಿಕ್ಸ್ ಕಡೆಗೆ ಸಾಗುತ್ತಿದ್ದರೆ ಭಾರತದಂಥ ದೇಶ ತನ್ನ ವಿಸ್ತಾರವಾದ ಜನಸಂಖ್ಯೆಯ ಜೊತೆಗೆ ಕೃತಕ ಬುದ್ಧಿವಂತಿಕೆಯ ಅಳವಡಿಕೆಯೊಂದಿಗೆ ಉದ್ಯೋಗ ಸೃಷ್ಟಿಯ ಕಡೆಗೆ ಗಮನ ನೀಡುವುದು ಅಗತ್ಯ ಎಂದು ಹೇಳಿದರು.
ಜಾಗತಿಕ ಬದಲಾವಣೆಗಳಿಂದ ಮೂರನೇ ಸವಾಲು ಹೊರಹೊಮ್ಮುತ್ತಿದೆ. ಕೆಲವು ದೇಶಗಳಲ್ಲಿ ವೃದ್ಧರ ಸಂಖ್ಯೆ ಹೆಚ್ಚುತ್ತಿರುವುದು ನಮಗೆ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಅಲ್ಲಿ ನಾವು ಸ್ಪರ್ಧಾತ್ಮಕ ಉತ್ಪಾದನಾ ಪರಿಹಾರಗಳನ್ನು ಪೂರೈಸಬೇಕಷ್ಟೇ. ಸಮರ್ಥ ಮತ್ತು ಸ್ವಯಂಚಾಲಿತ ಪ್ರಕ್ರಿಯೆಗಳನ್ನು ಕೈಗಾರಿಕೆಗಳು ಕೈಗೊಳ್ಳುತ್ತಿದ್ದು, ಅದರ ಬಗ್ಗೆ ಎಚ್ಚರಿಕೆ ವಹಿಸಿ ನಾವೀನ್ಯತೆಯ ಕಡೆಗೆ ಗಮನ ನೀಡಬೇಕಿದೆ ಎಂದರು.
ಕರ್ನಾಟಕ ಸರ್ಕಾರ ಆಂತರಿಕ ಉತ್ಪನ್ನಕ್ಕೆ ಗಮನಾರ್ಹ ಮೌಲ್ಯವರ್ಧನೆಗಳ ಕಡೆಗೆ ಕಣ್ಣಿಟ್ಟಿದೆ. ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನಗಳು ಮತ್ತು ಕೌಶಲ್ಯಪೂರ್ಣ ಕೆಲಸಗಾರರ ಪ್ರಾಮುಖ್ಯತೆಯ ಕಡೆಗೆ ಸರ್ಕಾರ ಒತ್ತು ನೀಡಿದೆ. ಇದು ಬೆಳವಣಿಗೆಗೆ ಅವಕಾಶ ಮಾಡಿಕೊಡಲಿದೆ.