ಬೆಂಗಳೂರು:ಮುಂಬರುವಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಬಯಕೆ ಇದೆ. ಪಕ್ಷ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಿದ್ದಲ್ಲಿ ಸ್ಪರ್ಧಿಸಲು ಸಿದ್ಧ. ಆದರೆ ಅದೆಲ್ಲಾ ಹೈಕಮಾಂಡ್ಗೆ ಬಿಟ್ಟ ವಿಚಾರ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಕೂಡ ಹಾವೇರಿ ಲೋಕಸಭೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಲೋಕಸಭಾ ಚುನಾವಣೆಗೆ ಹಾಲಿ ಸಂಸದ ಶಿವಕುಮಾರ್ ಉದಾಸಿ ನಿಲ್ಲಲ್ಲ ಅಂತ ಹೇಳಿದ್ದಾರೆ. ನನಗೆ ಅವಕಾಶ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ. ನಾನೀಗ ನಿರುದ್ಯೋಗಿಯಾಗಿದ್ದೇನೆ. ಈಶ್ವರಪ್ಪ ಕೂಡ ತಮ್ಮ ಮಗನಿಗೂ ಟಿಕೆಟ್ ಕೇಳಿದ್ದಾರೆ. ಎಲ್ಲವನ್ನೂ ಹೈಕಮಾಂಡ್ ನಿರ್ಧರಿಸಲಿದೆ ಎಂದರು.
ಲಿಂಗಾಯತರ ಕಡೆಗಣನೆ ವಿಚಾರ: ಕಾಂಗ್ರೆಸ್ನಲ್ಲಿ ಲಿಂಗಾಯತರ ಕಡೆಗಣನೆ ಆಗುತ್ತಿರುವುದು ನೂರಕ್ಕೆ ನೂರು ಸತ್ಯ. ಶಾಮನೂರು ಶಿವಶಂಕರಪ್ಪ ಹೇಳಿಕೆ ನಿಜ. ಯಾರಾದರೂ ಲಿಂಗಾಯತರು ಪೋಸ್ಟಿಂಗ್ಗೆ ಬಂದರೆ ಕೊಡಬೇಡಿ ಅಂತ ಸಿಎಂ ಕಡೆಯಿಂದ ಸಚಿವರಿಗೆ ಕರೆ ಹೋಗುತ್ತಿದೆ ಎಂದು ದೂರಿದರು.
ಸರ್ಕಾರ ಪತನದ ಕುರಿತು ಹೆಚ್.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಪಾಟೀಲ್, ಸರ್ಕಾರ ಬಿದ್ದು ಹೋಗುವ ಬಗ್ಗೆ ನಮಗಿಂತ ಮಾಧ್ಯಮಗಳಿಗೆ ಹೆಚ್ಚು ಗೊತ್ತು. ಎಲ್ಲವನ್ನೂ ಕಾಲವೇ ನಿರ್ಣಯಿಸಲಿದೆ ಎಂದರು.
ರಾಜ್ಯದಲ್ಲಿ ರೈತರಿಗೆ ಆತ್ಮಹತ್ಯೆ ಗ್ಯಾರಂಟಿ ನೀಡುವ ಕಾಂಗ್ರೆಸ್ ಸರಕಾರವಿದೆ. ಸರಕಾರ ರೈತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಇದರಿಂದ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ವಿದ್ಯುತ್ ಕೊಡಲು ಸಾಧ್ಯವಾಗುತ್ತಿಲ್ಲ. ಲೋಡ್ ಶೆಡ್ಡಿಂಗ್ ಇದೆ. ರಾಜ್ಯಾದ್ಯಂತ ಬರಗಾಲದ ಛಾಯೆ ಆವರಿಸಿದೆ ಎಂದು ಹೇಳಿದರು.
ಈ ವರ್ಷ ಇದುವರೆಗೂ 11,18,527 ಹೆಕ್ಟೇರ್ ಭೂಮಿಯಲ್ಲಿ ಬೆಳೆ ಹಾನಿ ಸಂಭವಿಸಿದೆ. ಆದರೆ, ಸರಕಾರ ಒಬ್ಬನೇ ಒಬ್ಬ ರೈತರಿಗೆ ಒಂದೇ ಒಂದು ಹೆಕ್ಟೇರ್ಗೆ ಒಂದು ಪೈಸೆ ಪರಿಹಾರವನ್ನೂ ಕೊಟ್ಟಿಲ್ಲ. ಕಳೆದ ವರ್ಷ ನಮ್ಮ ಬಿಜೆಪಿ ಸರಕಾರದ ಅವಧಿಯಲ್ಲಿ 39,74,741 ಹೆಕ್ಟೇರ್ ಭೂಮಿಯಲ್ಲಿ ಅತಿವೃಷ್ಟಿಯಿಂದ ಬೆಳೆ ನಷ್ಟವಾಗಿತ್ತು. ಆಗ ನಾವು ಕೇಂದ್ರದಿಂದ ಬರ ಪರಿಹಾರಕ್ಕಾಗಿ ಕಾಯಲಿಲ್ಲ.
ನಿಯಮಾವಳಿ ಪ್ರಕಾರ ಒಂದು ಹೆಕ್ಟೇರ್ಗೆ 6,800 ರೂ ಇದ್ದರೆ, ನಮ್ಮ ಸರಕಾರ 13,600 ರೂ. ಅಂದರೆ ದ್ವಿಗುಣ ಮೊತ್ತದ ಪರಿಹಾರ ಕೊಟ್ಟಿದ್ದೇವೆ. ತೋಟಗಾರಿಕಾ ಬೆಳೆಗೆ 13 ಸಾವಿರದ ಬದಲು 25 ಸಾವಿರಕ್ಕೆ ಏರಿಸಲಾಗಿತ್ತು ಎಂದು ತಿಳಿಸಿದರು. ನೀರಾವರಿ ಬೆಳೆಗೆ 18 ಸಾವಿರದ ಬದಲು 28 ಸಾವಿರ ರೂ ಕೊಟ್ಟಿದ್ದು, ಕಳೆದ ಸಾಲಿನಲ್ಲಿ ಒಟ್ಟು 2,100 ಕೋಟಿ ರೂಪಾಯಿಯನ್ನು 14,62,841 ರೈತರಿಗೆ ಪರಿಹಾರವಾಗಿ ಕೊಟ್ಟಿದ್ದೇವೆ ಎಂದರು.
ಇದನ್ನೂ ಓದಿ:ಅನುದಾನ ರದ್ದು: ಮೌನ ಪ್ರತಿಭಟನೆ ವಾಪಸ್ ಪಡೆದು ಡಿ.ಕೆ.ಸುರೇಶ್‌ಗೆ ಟಾಂಗ್ ಕೊಟ್ಟ ಮುನಿರತ್ನ