ಕರ್ನಾಟಕ

karnataka

ETV Bharat / state

ಸೂಕ್ಷ್ಮ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಅಂತರಗಂಗೆ ನಿಗಮ ಸ್ಥಾಪನೆ: ಸಚಿವ ಬಿ.ಸಿ.ಪಾಟೀಲ್​ - ಅಂತರಗಂಗಾ ಸೂಕ್ಷ್ಮ ನೀರಾವರಿ ನಿಗಮ

ಕರ್ನಾಟಕ ಅಂತರಗಂಗೆ ಸೂಕ್ಷ್ಮ ನೀರಾವರಿ ನಿಗಮ (ಕೆಮಿಕ್) ಸ್ಥಾಪನೆಗೆ 2011 ಮತ್ತು 2018ರಲ್ಲಿ ಸರ್ಕಾರಿ ಆದೇಶ ಹೊರಡಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.

bc patil
ಕೃಷಿ ಸಚಿವ ಬಿ.ಸಿ. ಪಾಟೀಲ್

By

Published : Mar 16, 2020, 6:46 PM IST

ಬೆಂಗಳೂರು:ಕೃಷಿ ಇಲಾಖೆಯಲ್ಲಿ ಸೂಕ್ಷ್ಮ ನೀರಾವರಿ ಯೋಜನೆಯನ್ನು ಅಂತರಗಂಗೆ ಕಾರ್ಪೋರೇಷನ್ ಮೂಲಕ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದ್ದು, ಕರ್ನಾಟಕ ಅಂತರಗಂಗೆ ಸೂಕ್ಷ್ಮ ನೀರಾವರಿ ನಿಗಮ (ಕೆಮಿಕ್) ಸ್ಥಾಪನೆಗೆ 2011 ಮತ್ತು 2018ರಲ್ಲಿ ಸರ್ಕಾರಿ ಆದೇಶ ಹೊರಡಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಇಂದು ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ವೀರಭದ್ರಯ್ಯ ಎಂ.ವಿ. ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯದ ಪರಿಸ್ಥಿತಿಯ ಮಳೆ ಹಂಚಿಕೆ, ಅಂತರ್ಜಲ ಮಟ್ಟವನ್ನು ಗಮನಿಸಿದಾಗ ಸೂಕ್ಷ್ಮ ನೀರಾವರಿ ಕಾರ್ಯಕ್ರಮಗಳಿಗೆ ಪ್ರತ್ಯೇಕವಾಗಿ ಒತ್ತು ನೀಡುವುದು ಅನಿವಾರ್ಯ ಇರುವುದರಿಂದ ನಿಗಮದ ಅವಶ್ಯಕತೆ ಇರುತ್ತದೆ. ಈ ನಿಟ್ಟಿನಲ್ಲಿ ಅಂತರರಂಗೆ ಕಾರ್ಪೋರೇಷನ್ ಪ್ರಾರಂಭಿಸಲಾಗಿದೆ ಎಂದು ಹೇಳಿದರು.

2014ರಲ್ಲಿ ಇದನ್ನು ಪ್ರಾರಂಭಿಸಲಾಗಿದ್ದು, 2015ರಲ್ಲಿ ನೋಂದಣಿ ಮಾಡಲಾಗಿದೆ. 2019-20ರಲ್ಲಿ 336 ಕೋಟಿ ರೂ.ಗಳನ್ನು ಯೋಜನೆಗಾಗಿ ಬಜೆಟ್‌ನಲ್ಲಿ ಇಡಲಾಗಿದ್ದು, 269 ಕೋಟಿ ರೂ. ಬಿಡುಗಡೆಯಾದ ಹಣದಲ್ಲಿ 254 ಕೋಟಿ ರೂ.ಗಳನ್ನು ಯೋಜನೆಗಾಗಿ ವ್ಯಯಿಸಲಾಗಿದೆ ಎಂದರು.

ಹನಿ, ತುಂತುರು ಮತ್ತು ರೈನ್‌ಗನ್ ಘಟಕಗಳನ್ನು ಅನುಷ್ಠಾನ ಮಾಡುವುದು. ರೈತರಿಗೆ ಗುಣಮಟ್ಟದ ಸಾಮಗ್ರಿಗಳ ಸರಬರಾಜು, ಸಮಯೋಚಿತ ಮತ್ತು ತ್ವರಿತವಾಗಿ ವಿತರಿಸಲಾಗುವುದು ಎಂದರು. ವಿವಿಧ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ರಿಯಾಯಿತಿ ಯೋಜನೆಗಳು ಮತ್ತು ಸೂಕ್ಷ್ಮ ನೀರಾವರಿ ಯೋಜನೆಗಳ ಉಪಯುಕ್ತತೆ ಕುರಿತು ರೈತ ಸಮುದಾಯಗಳಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.

ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳಲ್ಲಿ ಅನುಷ್ಠಾನ ಮಾಡುತ್ತಿರುವ ಸೂಕ್ಷ್ಮ ನೀರಾವರಿ ಯೋಜನೆಗಳನ್ನು ಏಕಗವಾಕ್ಷಿ ಮಾದರಿಯಲ್ಲಿ ನಿಗಮದಿಂದ ಅನುಷ್ಠಾನ ಮಾಡುವುದರಿಂದ ರಿಯಾಯಿತಿ ಸೌಲಭ್ಯ ಪುನರಾವರ್ತನೆ ಮತ್ತು ಅನುದಾನ ದುರ್ಬಳಕೆ ತಡೆಯಬಹುದಾಗಿದೆ. ಫಲಾನುಭವಿಗಳ ಅರ್ಜಿ ಸ್ವೀಕೃತಿ ಪ್ರಕ್ರಿಯೆಯಿಂದ ಅನುಷ್ಠಾನದವರೆಗೆ ಗಣಕೀರಿಸಲಾಗುವುದು ಎಂದು ನಿಗಮದ ಉದ್ದೇಶವನ್ನು ವಿವರಿಸಿದರು.

ಇಲಾಖೆಗಳ ಎಲ್ಲಾ ಕಾರ್ಯಕ್ರಮಗಳಲ್ಲಿ ಸೂಕ್ಷ್ಮ ನೀರಾವರಿ ಯೋಜನೆಯನ್ನು ಒಂದಾಗಿ ಪರಿಗಣಿಸಲಾಗುತ್ತಿದೆ. ಪ್ರಸ್ತುತ ಸೂಕ್ಷ್ಮ ನೀರಾವರಿ ಕಾರ್ಯಕ್ರಮಗಳು ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಗಳಲ್ಲಿ ಪ್ರತ್ಯೇಕವಾಗಿ ನಡೆಯುತ್ತಿವೆ ಎಂದರು. ರೈತರು ಬೇರೆ ಬೇರೆ ಬೆಳೆಗಳಿಗೆ ಪ್ರತ್ಯೇಕ ಅರ್ಜಿಗಳನ್ನು ನೀಡಬೇಕಾಗಿರುತ್ತದೆ. ಪ್ರಸ್ತುತ ರೇಷ್ಮೆ ಇಲಾಖೆ ಹೊರತುಪಡಿಸಿ ಇಲಾಖಾವಾರು ಪ್ರತ್ಯೇಕ ತಂತ್ರಾಂಶಗಳಿದ್ದು, ರೈತರು ಎಲ್ಲಾ ಇಲಾಖೆಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಸ್ಪಷ್ಟಪಡಿಸಿದರು.

ABOUT THE AUTHOR

...view details