ಬೆಂಗಳೂರು:"ಮೊಟ್ಟೆ ತಿನ್ನುವ ಮಕ್ಕಳಿಗೆ ಬಾಳೆಹಣ್ಣು ಮತ್ತು ಚೆಕ್ಕಿಯನ್ನು ಒತ್ತಾಯಪೂರ್ವಕವಾಗಿ ನೀಡುತ್ತಿಲ್ಲ. ಯಾರಿಗೆ ಮೊಟ್ಟೆ ಬೇಕೋ ಅವರಿಗೆ ಮೊಟ್ಟೆಯನ್ನೇ ನೀಡಲಾಗುತ್ತಿದ್ದು, ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು ಮತ್ತು ಚೆಕ್ಕಿಯನ್ನು ನೀಡಲಾಗುತ್ತಿದೆ" ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಕೆ.ಎ ತಿಪ್ಪೇಸ್ವಾಮಿ ಕೇಳಿದ ಶಾಲಾ ಮಕ್ಕಳಿಗೆ ಬಿಸಿಯೂಟದಲ್ಲಿ ಮೊಟ್ಟೆ ನೀಡುವ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, "ಬಿಸಿಯೂಟದಲ್ಲಿ ಶಾಲಾ ಮಕ್ಜಳಿಗೆ ಮೊಟ್ಟೆ ಕೊಡಬೇಕು ಎಂಬುದು 2007ರಲ್ಲಿ ಕೈಗೊಳ್ಳಲಾದ ನಿರ್ಧಾರವಾಗಿದೆ. ಆದರೆ ಈವರೆಗೂ ಮಕ್ಕಳಿಗೆ ಮೊಟ್ಟೆ ವಿತರಿಸದಂತೆ ನೋಡಿಕೊಳ್ಳಲಾಗಿದ್ದು, ಇದರಲ್ಲಿ ಯಾರ ಒತ್ತಡವಿತ್ತೋ ಗೊತ್ತಿಲ್ಲ. ಆದರೆ ನಾವು ಧೈರ್ಯ ಮಾಡಿ ಮಕ್ಕಳಿಗೆ ಬಿಸಿಯೂಟದಲ್ಲಿ ಮೊಟ್ಟೆ ಕೊಡುತ್ತಿದ್ದೇವೆ" ಎಂದರು.
"ಈ ವ್ಯವಸ್ಥೆಯನ್ನು ಒಟ್ಟಿಗೆ ಜಾರಿಗೆ ತರುವ ಬದಲು ಅಪೌಷ್ಟಿಕತೆ ಇರುವ ಕಡೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮೊದಲು ಜಾರಿಗೆ ತರಲಾಗಿದೆ. ನಂತರ ಇತರ ಜಿಲ್ಲೆಗೆ ವಿಸ್ತರಿಸಲಾಗುತ್ತಿದೆ. ಮೊಟ್ಟೆ ಕೊಟ್ಟ ನಂತರ ಪೌಷ್ಟಿಕತೆಯಲ್ಲಿನ ಬದಲಾವಣೆ ಕುರಿತು ಅಧ್ಯಯನ ವರದಿ ಪಡೆಯಲಾಗಿದೆ. ಅದರಂತೆ ಪೌಷ್ಟಿಕತೆ ಹೆಚ್ಚಾಗಿದ್ದನ್ನು ಮನಗಂಡು ಮೊಟ್ಟೆ ಕೊಡುವುದನ್ನು ಮುಂದುವರೆಸಲಾಗುತ್ತದೆ. ಯಾರಿಗೂ ಮೊಟ್ಟೆ ಅಥವಾ ಬಾಳೆಹಣ್ಣು ತಿನ್ನಿ ಎಂದು ಒತ್ತಾಯ ಇಲ್ಲ, ಯಾರಿಗೆ ಯಾವುದು ಬೇಕೋ ಅದನ್ನು ಕೊಡಲಾಗುತ್ತದೆ" ಎಂದು ತಿಳಿಸಿದರು.
"ಅಲ್ಲದೇ ಸರ್ಕಾರವು ನೈತಿಕ ಶಿಕ್ಷಣ ಕೊಡಬೇಕು ಎನ್ನುವ ನಿರ್ಧಾರಕ್ಕೆ ಬಂದಿದೆ. ಆದರೆ ಸಾತ್ವಿಕ ಆಹಾರದ ಬಗ್ಗೆ ಇಲಾಖೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ" ಎಂದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಸಭಾಪತಿ ಬಸವರಾಜ ಹೊರಟ್ಟಿ, "ಶಾಲೆಗಳಲ್ಲಿ ಮಕ್ಕಳಿಗೆ ಮಾರಲ್ ಎಜುಕೇಶನ್ ಇರಬೇಕು, ವಾರಕ್ಕೆ ಒಂದು ಪೀರಿಯಡ್ ಆದರೂ ಇದನ್ನು ಮಾಡಬೇಕು, ನನ್ನ ಸಲಹೆ ಪರಿಗಣಿಸಿ" ಎಂದು ಹೇಳಿದರು. ಇದಕ್ಕೆ ಪ್ರತಿಪಕ್ಷ ಸದಸ್ಯರು ದನಿಗೂಡಿಸಿದರು.
ಇದನ್ನೂ ಓದಿ:ಪರೀಕ್ಷೆ ವೇಳೆ ವಿದ್ಯುತ್ ತೊಂದರೆಯಾಗಲ್ಲ, ಬೇಸಿಗೆ ವಿದ್ಯುತ್ ಬೇಡಿಕೆ ಪೂರೈಕೆಗೆ ಸಿದ್ಧ: ಸುನೀಲ್ ಕುಮಾರ್
ಶಿಕ್ಷಕರ ಮುಂಬಡ್ತಿ ಕುರಿತು ಸಭೆ ನಡೆಸಿ ನಿರ್ಧಾರ:ಕಲಾಪದಲ್ಲಿ ಸರ್ಕಾರಿ ಪ್ರೌಢ ಶಾಲೆ ಸಹ ಶಿಕ್ಷಕರಿಗೆ ಪದವಿಪೂರ್ವ ಉಪನ್ಯಾಸಕರಾಗಿ ಮುಂಬಡ್ತಿ ನೀಡುವ ಕುರಿತು ಬಿಜೆಪಿ ಸದಸ್ಯರಾದ ಎಸ್.ವಿ ಸಂಕನೂರು ಮತ್ತು ಹನುಮಂತ ನಿರಾಣಿ ಪ್ರಶ್ನೆಗೆ ಉತ್ತರಿಸಿದ ಸಚಿವರು, "ಕೆಲ ವರ್ಷದಿಂದ ಯಾವುದೇ ಮುಂಬಡ್ತಿ ನೀಡಿಲ್ಲ. ಪವಿತ್ರಾ ಪ್ರಕರಣ ಅಲ್ಲದೇ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳದಂತೆ ಪಟ್ಟಿ ಬರಬೇಕಿದೆ. ನಂತರ ಮೀಸಲಾತಿಯಂತೆ ಪಟ್ಟಿ ಪರಿಷ್ಕರಣೆ ಮಾಡಿ ಮುಂಬಡ್ತಿಗೆ ಕ್ರಮ ಕೈಗೊಳ್ಳಲಾಗುತ್ತದೆ. ಸದ್ಯ ಇರುವ 75:25 ರ ಅನುಪಾತದಲ್ಲಿ ಮಾಡಲಾಗುತ್ತದೆ" ಎಂದು ಭರವಸೆ ನೀಡಿದರು.
ಆದರೆ ಇದಕ್ಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. "ಸಿದ್ದರಾಮಯ್ಯ ಅವರ ಸರ್ಕಾರದ ವೇಳೆಯಲ್ಲಿಯೇ ಶೇ. 50:50 ರ ಅನುಪಾತದಲ್ಲಿ ಮುಂಬಡ್ತಿ ನೀಡಬೇಕು ಮತ್ತು ಯಾವುದೇ ಇಲಾಖೆಯಲ್ಲಿ ಮುಂಬಡ್ತಿ ನೀಡುವಾಗ ಇಲ್ಲದ ಪರೀಕ್ಷೆ ಶಿಕ್ಷಣ ಇಲಾಖೆಯಲ್ಲಿ ಏಕೆ? ಕೂಡಲೇ ಇದನ್ನು ಸರಿಪಡಿಸಬೇಕು" ಎಂದು ಆಗ್ರಹಿಸಿದರು. ಸದಸ್ಯರ ಒತ್ತಡಕ್ಕೆ ಸ್ಪಂದಿಸಿದ ಸಚಿವರು, "ಸಿ ಅಂಡ್ ಆರ್ ರೂಲ್ ಬಗ್ಗೆ ಸದನ ಮುಗಿಯುವ ಒಳಗೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಪರೀಕ್ಷೆಯ ಕುರಿತು ಅದೇ ಸಭೆಯಲ್ಲಿ ನಿರ್ಧರಿಸಲಾಗುತ್ತದೆ" ಎಂದರು.
"ಪ್ರೌಢ ಶಾಲೆ ಶಿಕ್ಷಕರಿಗೆ ಪದವಿಪೂರ್ವ ಉಪನ್ಯಾಸಕರಾಗಿ ಮುಂಬಡ್ತಿ ನೀಡುವ ಪ್ರಮಾಣವನ್ನು ಈಗಿರುವ ಶೇ. 25 ರಿಂದ 50 ಕ್ಕೆ ಪರಿಷ್ಕರಣೆ ಮಾಡುವ ಕುರಿತು ಹಾಗೂ ಮುಂಬಡ್ತಿ ವೇಳೆ ಪರೀಕ್ಷೆ ತೆಗೆದುಹಾಕುವ ಕುರಿತು ಪ್ರಸ್ತುತ ಅಧಿವೇಶನ ಮುಗಿಯುವುದರ ಒಳಗಾಗಿ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುತ್ತದೆ" ಎಂದು ಸ್ಪಷ್ಟನೆ ನೀಡಿದರು.
ಹಣಕಾಸು ಲಭ್ಯತೆ ನೋಡಿ ಹೊಸ ಶಾಲಾ ಕೊಠಡಿ:ಸದಸ್ಯ ಗೋವಿಂದರಾಜು ಪ್ರಶ್ನೆಗೆ ಉತ್ತರಿಸಿದ ಸಚಿವರು, "ಜಿಲ್ಲೆಯ ಅನೇಕ ಕಡೆ ಹೊಸ ಕೊಠಡಿ ಕೊಡದ ಕಾರಣ ಸರ್ಕಾರಿ ಶಾಲೆಗಳ ಕೊಠಡಿ ಉತ್ತಮ ಸ್ಥಿತಿಯಲ್ಲಿಲ್ಲ. ಕೋಲಾರದಲ್ಲಿ ಎಷ್ಟು ಕೊಠಡಿ ದುಃಸ್ಥಿತಿಯಲ್ಲಿವೆ ಎನ್ನುವ ಕುರಿತು ವರದಿ ಪಡೆದು ದುರಸ್ತಿಗೆ ಕ್ರಮ ವಹಿಸಲಾಗುತ್ತದೆ. ಹಣಕಾಸು ಲಭ್ಯತೆ ನೋಡಿ ಹೊಸ ಕೊಠಡಿ ನಿರ್ಮಾಣಕ್ಕೆ ನಿರ್ಧಾರ ಕೈಗೊಳ್ಳಲಾಗುತ್ತದೆ" ಎಂದು ತಿಳಿಸಿದರು.
ಇದನ್ನೂ ಓದಿ:ರಾಹುಲ್ ಗಾಂಧಿ ರಾಜ್ಯಕ್ಕೆ ಬಂದರೆ ಕಾಂಗ್ರೆಸ್ಗೆ ಬರುವ ವೋಟ್ ಕೂಡಾ ಬರಲ್ಲ: ಈಶ್ವರಪ್ಪ ವ್ಯಂಗ್