ಕರ್ನಾಟಕ

karnataka

By

Published : Aug 10, 2023, 5:58 PM IST

ETV Bharat / state

ಗೌತಮ್ ಗುತ್ತಿಗೆದಾರನಲ್ಲ, ಆತ್ಮಹತ್ಯೆಗೂ ಕಾಮಗಾರಿಗಳ ಬಿಲ್ ಬಾಕಿಗೂ ಸಂಬಂಧವಿಲ್ಲ: ಕೆಟಿ ಮಂಜುನಾಥ್

ಮಾಜಿ ಕಾರ್ಪೊರೇಟರ್ ದೊಡ್ಡಯ್ಯ ಪುತ್ರ ಗೌತಮ್ ಆತ್ಮಹತ್ಯೆಗೂ, ಗುತ್ತಿಗೆದಾರರ ಬಿಲ್​ ಪಾವತಿ ವಿಚಾರಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಟಿ ಮಂಜುನಾಥ್ ತಿಳಿಸಿದ್ದಾರೆ.

bbmp-working-contractors-association-president-kt-manjunath-reaction-on-gowtham-suicide
ಗೌತಮ್ ಗುತ್ತಿಗೆದಾರನಲ್ಲ,ಆತ್ಮಹತ್ಯೆಗೂ ಕಾಮಗಾರಿಗಳ ಬಿಲ್ ಬಾಕಿಗೂ ಸಂಬಂಧವಿಲ್ಲ: ಕೆಟಿ ಮಂಜುನಾಥ್

ಗೌತಮ್ ಗುತ್ತಿಗೆದಾರನಲ್ಲ,ಆತ್ಮಹತ್ಯೆಗೂ ಕಾಮಗಾರಿಗಳ ಬಿಲ್ ಬಾಕಿಗೂ ಸಂಬಂಧವಿಲ್ಲ: ಕೆಟಿ ಮಂಜುನಾಥ್

ಬೆಂಗಳೂರು :ಮಾಜಿ ಕಾರ್ಪೊರೇಟರ್ ದೊಡ್ಡಯ್ಯ ಪುತ್ರ ಗೌತಮ್ ಆತ್ಮಹತ್ಯೆಗೂ, ಗುತ್ತಿಗೆದಾರರ ಬಾಕಿ ಬಿಲ್ ವಿಚಾರಕ್ಕೂ ಯಾವುದೇ ಸಂಬಂಧ ಇಲ್ಲ. ಗೌತಮ್ ಗುತ್ತಿಗೆದಾರನೇ ಅಲ್ಲ. ಗೌತಮ್ ಸಹೋದರ ಹರೀಶ್ ಮಾತ್ರ ಗುತ್ತಿಗೆದಾರ. ಹಾಗಾಗಿ ಈ ಆತ್ಮಹತ್ಯೆಗೂ ಬಾಕಿ ಬಿಲ್ ವಿಚಾರಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಟಿ ಮಂಜುನಾಥ್ ಸ್ಪಷ್ಟಪಡಿಸಿದ್ದಾರೆ.

ಆರ್.ಟಿ ನಗರದಲ್ಲಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘದ ನಿಯೋಗ ಭೇಟಿ ನೀಡಿತು. ಈ ವೇಳೆ ಕಾಮಗಾರಿಗಳ ಗುತ್ತಿಗೆ ಬಿಲ್ ಬಾಕಿ ವಿಚಾರದ ಕುರಿತು ಚರ್ಚಿಸಿದರು. ಸರ್ಕಾರದ ಧೋರಣೆ ಕುರಿತು ವಿವರ ನೀಡಿ ಸಹಕಾರ ನೀಡುವಂತೆ ಮನವಿ ಮಾಡಿತು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ ಟಿ ಮಂಜುನಾಥ್, ಈಗತಾನೆ ಮಾಜಿ ಕಾರ್ಪೊರೇಟರ್ ಪುತ್ರ ಗೌತಮ್ ಆತ್ಮಹತ್ಯೆ ಸುದ್ದಿ ತಿಳಿಯಿತು. ಆತ್ಮಹತ್ಯೆ ಮಾಡಿಕೊಂಡಿರುವ ಗೌತಮ್ ಸಹೋದರ ಹರೀಶ್ ನನ್ನ ಸ್ನೇಹಿತ. ಅವರ ಜೊತೆ ಆತ್ಮಹತ್ಯೆ ವಿಚಾರದ ಕುರಿತು ಮಾತನಾಡಿದ್ದೇನೆ. ಆತ್ಮಹತ್ಯೆಗೆ ಕಾರಣ ಏನು ಎನ್ನುವ ಕುರಿತು ಇನ್ನೂ ಸರಿಯಾದ ಮಾಹಿತಿ ಸಿಕ್ಕಿಲ್ಲ. ಆದರೆ ಗೌತಮ್ ಗುತ್ತಿಗೆದಾರ ಅಲ್ಲ. ಅವರ ಸಹೋದರ ಹರೀಶ್ ಗುತ್ತಿಗೆದಾರ, ಈ ವಿಚಾರದಲ್ಲಿ ಯಾರೂ ಅಪಪ್ರಚಾರ ಮಾಡಬಾರದು. ಆತ್ಮಹತ್ಯೆಗೂ ಬಿಲ್​ಗೂ ಸಂಬಂಧ ಇಲ್ಲ. ಅವರು ಮೂರು ದಿನದಿಂದ ಡಿಪ್ರೆಷನ್ ನಲ್ಲಿದ್ದರು ಎನ್ನುವ ಮಾಹಿತಿ ಇದೆ. ಈಗ ಅವರ ಮನೆಗೆ ಹೋಗಿ ಹೆಚ್ಚಿನ ಮಾಹಿತಿ ಪಡೆದು ನಂತರ ವಿವರ ಹಂಚಿಕೊಳ್ಳಲಿದ್ದೇನೆ ಎಂದು ತಿಳಿಸಿದರು.

ಅಳಿದುಳಿದ ಕಾಮಗಾರಿಗಳೂ ಬಂದ್: ಗುತ್ತಿಗೆ ಕಾಮಗಾರಿಗಳ ಬಾಕಿ ಬಿಲ್ ಪಾವತಿ ಕುರಿತು ನಾವು ಬೆಂಗಳೂರಿನ ಎಲ್ಲ 28 ಶಾಸಕರಿಗೂ ಮನವಿ ಮಾಡುತ್ತಿದ್ದೇವೆ. ಬೆಂಗಳೂರು ಸಚಿವರಿಗೂ ಮನವಿ ಕೊಟ್ಟಿದ್ದೇವೆ. ಕಾಂಗ್ರೆಸ್ ಶಾಸಕರಿಗೂ ಮನವಿ ಕೊಡಲಿದ್ದೇವೆ. ಎಲ್ಲರಿಗೂ ಮನವಿ ಸಲ್ಲಿಸಿದ ನಂತರ ಯಾವ ರೀತಿ ಮುಂದಿನ ಹೆಜ್ಜೆ ಇಡಬೇಕು ಎಂದು ನಿರ್ಧರಿಸಲಾಗುತ್ತದೆ. ಈಗಾಗಲೇ ಸೋಮವಾರದಿಂದ ಕಾಮಗಾರಿ ಸ್ಥಗಿತಗೊಳಿಸಿದ್ದೇವೆ. ಎಲ್ಲೋ ಒಂದೆರಡು ಕಡೆ ಕಾಮಗಾರಿ ನಡೆಯುತ್ತಿದೆ. ಅದನ್ನೂ ತಡೆ ಹಿಡಿಯುವ ಕೆಲಸ ಮಾಡಲಿದ್ದೇವೆ ಎಂದು ಕೆಟಿ ಮಂಜುನಾಥ್ ಸ್ಪಷ್ಟಪಡಿಸಿದರು.

ಕೆಂಪಣ್ಣ ನಿರ್ಧಾರಕ್ಕೆ ಬದ್ಧ :ಕೆಂಪಣ್ಣ ನಮ್ಮ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷರು. ನಮ್ಮ ಹಿತದೃಷ್ಟಿಯಿಂದ ಅವರು ಏನು ನಿರ್ಧಾರ ಕೈಗೊಳ್ಳಲಿದ್ದಾರೋ ಅದಕ್ಕೆ ನಾವು ಬದ್ಧರಾಗಿದ್ದೇವೆ. ಬಾಕಿ ಬಿಲ್ ಪಾವತಿಯಾಗಬೇಕು, ಗುತ್ತಿಗೆದಾರರಿಗೆ ಕಿರುಕುಳ ಆಗಬಾರದು ಎನ್ನುವುದೇ ನಮ್ಮ ನಿಲುವು. ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಇಂತವರು ಕಮಿಷನ್ ಕೇಳಿದ್ದಾರೆ ಎಂದು ನಾವು ಹೇಳಿಲ್ಲ. ಕಮಿಷನ್ ಬೇಡಿಕೆ ಆರೋಪ ಬಂದಿದೆ ಎಂದಿದ್ದೇವೆ. ಮಾಹಿತಿ ಇಲ್ಲದೆ ಯಾರ ಮೇಲೆಯೂ ನೇರ ಆಪಾದನೆ ಮಾಡಲ್ಲ. ಹಿಂದಿನ ಸರ್ಕಾರದಲ್ಲಿದ್ದ 40 ಪರ್ಸೆಂಟ್ ಕಮಿಷನ್ ಆರೋಪ ಯಾರೋ ಒಬ್ಬರಿಗೆ ಅಥವಾ ಸರ್ಕಾರಕ್ಕೆ 40 ಪರ್ಸೆಂಟ್ ಕೊಡಬೇಕು ಎನ್ನುವುದಲ್ಲ. ವ್ಯವಸ್ಥೆಯಲ್ಲಿ 40 ಪರ್ಸೆಂಟ್ ಆಗುತ್ತಿದೆ ಎಂದು ಹೇಳಿದ್ದೆವು. ವ್ಯವಸ್ಥೆಯೊಳಗಡೆ ಭ್ರಷ್ಟಾಚಾರ ನಿರ್ಮೂಲನೆ ಕಷ್ಟ ಸಾಧ್ಯ. ಹೊಸ ಕಾಮಗಾರಿ ಹೊಸ ಸರ್ಕಾರದಿಂದ ತೆಗೆದುಕೊಂಡಿಲ್ಲ. ಹಾಗಾಗಿ ಈಗ ಎಷ್ಟು ಪರ್ಸೆಂಟ್ ಎಂದು ಗೊತ್ತಿಲ್ಲ, ನಂತರ ನೋಡಬೇಕು ಎಂದರು.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಅವರಿಗೆ ಇರುವ ಮಾಹಿತಿ ನಮಗೆ ಇಲ್ಲ. ಅವರು ಡಿಸಿಎಂ ಅವರಿಗೆ ಅವರದ್ದೇ ಆದ ಮಾಹಿತಿ ಇರಲಿದೆ. ನಕಲಿ ಬಿಲ್ ಎಲ್ಲಿ ಹೇಗೆ ಎಂದು ಮಾತುಕತೆ ನಡೆಸುತ್ತೇವೆ. ತನಿಖೆಗೆ ಕಾಲಮಿತಿ ಬೇಕು, ಆದರೆ 28 ತಿಂಗಳ ಬಾಕಿಗೆ ತನಿಖೆ ಅಗತ್ಯವಿಲ್ಲ. ಕಾಮಗಾರಿ ಗುಣಮಟ್ಟ ಪರಿಶೀಲನೆಗೆ 12 ತಿಂಗಳು ಮಾತ್ರ ಸಮಯ ಇದೆ. ಹಾಗಾಗಿ ಭದ್ರತಾ ಠೇವಣಿ ಸೇರಿ ಹಣ ನಮಗೆ ವಾಪಸ್ ಕೊಡಬೇಕು. ಆದರೂ ಬಿಲ್ ಪಾವತಿಸದೆ ಪಾಲಿಕೆ ಆಯುಕ್ತರು ತನಿಖೆ ನಡೆಸಿ ವರದಿ ನೀಡಿದ್ದಾರೆ. ಬಾಕಿ ಪಾವತಿಗೆ ಯಾಕೆ ವಿಳಂಬ ಎಂದು ಗೊತ್ತಾಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ :ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘದಿಂದ ಮುಂದುವರೆದ ಬಿಜೆಪಿ ನಾಯಕರ ಭೇಟಿ.. ಅಶೋಕ್ ಸಹಕಾರ ಕೋರಿದ ಅಧ್ಯಕ್ಷ ಕೆಟಿ ಮಂಜುನಾಥ್

For All Latest Updates

ABOUT THE AUTHOR

...view details