ಬೆಂಗಳೂರು: ನಗರದಲ್ಲಿ ಮತ್ತೊಂದು ಅವೈಜ್ಞಾನಿಕ ಮೇಲ್ಸೇತುವೆ ನೆಲಸಮಗೊಳಿಸಲಾಗುತ್ತಿದೆ. ಕಾರಣಾಂತರಗಳಿಂದ ಐಒಸಿ ಬಳಿ ನಿರ್ಮಿಸಲಾಗಿರುವ ಮೇಲ್ಸೇತುವೆಯನ್ನು ನೆಲಸಮಗೊಳಿಸಲು ತೀರ್ಮಾನಿಸಲಾಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಶೇಷ ಆಯುಕ್ತ ರವೀಂದ್ರ ಖಚಿತಪಡಿಸಿದ್ದಾರೆ. ಬಾಣಸವಾಡಿಯಿಂದ ಫ್ರೆಜರ್ ಟೌನ್‌ಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ನಿರ್ಮಿಸಲಾಗಿದ್ದ ಫ್ಲೈ ಓವರ್ ತೆರವು ಮಾಡಿ ಹೊಸದಾಗಿ ಮತ್ತೆ ಸೇತುವೆ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಕಿರಿದಾದ ಮೇಲ್ಸೇತುವೆ ನಿರ್ಮಾಣ ಮಾಡಿದ ನಂತರ ಈ ಭಾಗದ ರಸ್ತೆ ಸಂಚಾರಕ್ಕೆ ತೀವ್ರ ಆಡಚಣೆಯಾಗಿತ್ತು. ಇದರ ಜೊತೆಗೆ ಬೈಯಪ್ಪನಹಳ್ಳಿ ಸರ್.ಎಂ.ವಿ ಟರ್ಮಿನಲ್ ಆರಂಭಗೊಂಡ ನಂತರವಂತೂ ಇಲ್ಲಿನ ರಸ್ತೆ ಸಂಚಾರ ನರಕ ಸದೃಶ್ಯವಾಗಿ ಪರಿವರ್ತನೆಯಾಗಿತ್ತು. ಹೀಗಾಗಿ, ಅವೈಜ್ಞಾನಿಕ ಸೇತುವೆ ನೆಲಸಮಗೊಳಿಸಿ ಸುಮಾರು 350 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ ಎಂದು ರವೀಂದ್ರ ಹೇಳಿದ್ದಾರೆ.
ದ್ವಿಮುಖ ಸಂಚಾರ ವ್ಯವಸ್ಥೆ:ಮಾರುತಿ ಸೇವಾ ನಗರ, ಬಾಣಸವಾಡಿ, ಕಮ್ಮನಹಳ್ಳಿ ಮತ್ತು ಬೈಯಪ್ಪನಹಳ್ಳಿಗೆ ಸಂಚಾರ ಕಲ್ಪಿಸುವ ರೀತಿ ನಿರ್ಮಿಸಲಾಗುತ್ತಿರುವ ಹೊಸ ಮೇಲ್ಸೇತುವೆ ಮೇಲೆ ನಾಲ್ಕು ದಿಕ್ಕಿನಲ್ಲೂ ವಾಹನ ಸಂಚಾರಕ್ಕೆ ದ್ವಿಮುಖ ಸಂಚಾರದ ವ್ಯವಸ್ಥೆ ಕಲ್ಪಿಸಲಿದೆ. ವೃತ್ತಾಕಾರದ ಹೊಸ ಮೇಲ್ಸೇತುವೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೊದನೆ ದೊರೆತ ಕೂಡಲೇ ಕಾಮಗಾರಿ ಆರಂಭಿಸಲಾಗುವುದು ಎಂದು ವಿವರಣೆ ನೀಡಿದ್ದಾರೆ.
ಇದನ್ನೂ ಓದಿ:ಕಟ್ಟಡ ಸುರಕ್ಷತೆ ನಿರ್ಲಕ್ಷಿಸಿದರೆ ಬಿಬಿಎಂಪಿಯಿಂದಲೇ ನೆಲಸಮ.. ಖಡಕ್ ಎಚ್ಚರಿಕೆ ನೀಡಿದ ಆಯುಕ್ತ