ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದ ಹಗರಣಗಳ ದಾಖಲೆಯನ್ನು ಬಿಜೆಪಿ ನಾಯಕರು ಬಿಡುಗಡೆ ಮಾಡಿದರು. 3900 ಪುಟಗಳ ಬೃಹತ್ ದಾಖಲೆಯನ್ನು ಬಿಜೆಪಿ ವಕ್ತಾರ ಅಶ್ವಥ್ ನಾರಾಯಣ, ಬಿಜೆಪಿ ಮುಖಂಡ ಎನ್.ಆರ್. ರಮೇಶ್, ಮಾಜಿ ಉಪಮೇಯರ್ ಎಸ್.ಹರೀಶ್ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಬಿಡುಗಡೆ ಮಾಡಿದರು.
ಬಿಜೆಪಿ ವಕ್ತಾರ ಅಶ್ವಥ್ ನಾರಾಯಣ ಮಾತನಾಡಿ, 2018-19ರಲ್ಲಿ ಬೆಂಗಳೂರಿನ ರಸ್ತೆಗುಂಡಿಗೆ ಸಮಸ್ಯೆಗೆ ಪರಿಹಾರ ರೂಪದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವೈಟ್ ಟ್ಯಾಪಿಂಗ್ ಯೋಜನೆ ರೂಪಿಸಿತ್ತು. ಆದರೆ ಪ್ರತಿ ಕಿ.ಮೀ. ವೈಟ್ ಟ್ಯಾಪಿಂಗ್ ಐದಾರು ಕೋಟಿ ರೂಪಾಯಿ ಹೆಚ್ಚು ತೋರಿಸಿ ಅವ್ಯವಹಾರ ನಡೆಸಿದ್ದಾರೆ ಎಂದು ದೂರಿದರು.
ಮೊದಲ ಹಂತದಲ್ಲಿ 93.37 ಕಿ.ಮೀ. ಗೆ 1147.76 ಕೋಟಿ ರೂ, ಎರಡನೇ ಹಂತದಲ್ಲಿ 62.80 ಕಿ.ಮೀ ಗೆ 758.56 ಕೋಟಿ ರೂ. ಮೂರನೇ ಹಂತದಲ್ಲಿ 123 ಕಿ.ಮೀ ಗೆ 1139 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದ್ದಾರೆ. ಅವಶ್ಯಕತೆಯೇ ಇಲ್ಲದ ರಸ್ತೆಗಳನ್ನು ಯೋಜನೆಯಡಿ ತಂದಿದ್ದಾರೆ. ಜೊತೆಗೆ ಯೋಜನೆ ಪ್ರಾರಂಭಕ್ಕೆ ಮೊದಲೆ ಯುಜಿಡಿ ಲೈನ್ ಶಿಫ್ಟ್ ಮಾಡದೆ, ಎಲೆಕ್ಟ್ರಿಕ್ ಕಂಬಗಳನ್ನು ಶಿಫ್ಟ್ ಮಾಡದೆ, ಪಾದಚಾರಿ ಮಾರ್ಗಗಳನ್ನ ಸಿದ್ಧಪಡಿಸದೇ ರಸ್ತೆಗಳ ಕಾಂಕ್ರೀಟಿಕರಣಕ್ಕೆ ಅವಕಾಶ ಕೊಟ್ಟಿದ್ದಾರೆ. ಎನ್ ಸಿಸಿ ಮತ್ತು ಮಧುಕಾನ್ ಎಂಬ ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದೆ ಎಂದು ಆರೋಪಿಸಿದರು.
ಕರೇಸಂದ್ರ ಮತ್ತು ಯಡಿಯೂರ್ ವಾರ್ಡ್ಗಳಲ್ಲಿ ನಾವು ಪ್ರಾಯೋಗಿಕವಾಗಿ ಅದೇ ಕಾಮಗಾರಿಗಳನ್ನು ಕೈಗೆತ್ತಿಕೊಂಡಾಗ ಪ್ರತಿ ಕಿ.ಮೀ ಗೆ ಕೇವಲ 90 ಲಕ್ಷ ರೂ.ವೆಚ್ಚವಾಗಿದೆ. ಆದರೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವೈಟ್ ಟ್ಯಾಪಿಂಗ್ ಗೆ ಪ್ರತಿ ಕಿ.ಮೀ ಗೆ12 ಕೋಟಿ ರೂ. ವೆಚ್ಚ ಮಾಡಿರುವ ಲೆಕ್ಕ ತೋರಿಸಿದ್ದಾರೆ. ಬಹುಶಃ ಮಾಜಿ ಡಿಸಿಎಂ ಪರಮೇಶ್ವರ್ ನಿವಾಸದಲ್ಲಿ ಐಟಿ ದಾಳಿ ನಡೆದಾಗ ಸಿಕ್ಕಿರುವ ಹಣ ಇದೇ ವೈಟ್ ಟ್ಯಾಪಿಂಗ್ ಅವ್ಯವಹಾರದಲ್ಲಿ ಪಡೆದಿರುವ ಕಮೀಷನ್ ಹಣ ಎಂಬ ಶಂಕೆ ಇದೆ ಎಂದು ಬಿಜೆಪಿ ಮುಖಂಡರು ಹೇಳಿದರು.