ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಪ್ರಸ್ತುತ ನಿಗದಿ ಪಡಿಸಿರುವ ವಾರ್ಡ್‌ವಾರು ಮೀಸಲಾತಿಯನ್ನು ಮರು ಪರಿಶೀಲಿಸಲು ಸಾಧ್ಯವೇ ಎಂಬುದರ ಕುರಿತು ಬಗ್ಗೆ ತನ್ನ ಅಭಿಪ್ರಾಯವನ್ನು ತಿಳಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ. ಅಲ್ಲದೇ, ಸರ್ಕಾರದ ಅಭಿಪ್ರಾಯ ನೀಡುವವರೆಗೂ ಚುನಾವಣಾ ವೇಳಾಪಟ್ಟಿ ಪ್ರಕಟಿಸದಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಉಚ್ಛ ನ್ಯಾಯಾಲಯ ಸೂಚನೆ ನೀಡಿದೆ.
ಈಜಿಪುರದ ಕೆ.ಮಹದೇವ ಮತ್ತಿತರರು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿ ನ್ಯಾ.ಹೇಮಂತ್ ಚಂದನ್ ಗೌಡರ್ ಅವರಿದ್ದ ಏಕಸದಸ್ಯ ಪೀಠ ಈ ಸೂಚನೆ ನೀಡಿ ವಿಚಾರಣೆಯನ್ನು ಶುಕ್ರವಾರಕ್ಕೆ(ಸೆ.30) ಮುಂದೂಡಿತು. ಚುನಾವಣೆ ವಿಳಂಬವಾಗಬಾರದು ಮತ್ತು ಸುಪ್ರೀಂಕೋರ್ಟ್‌ನ ಆದೇಶದಂತೆ ನಡೆಯಬೇಕು. ಆದಷ್ಟೂ ಈ ವರ್ಷದೊಳಗೆ ಬಿಬಿಎಂಪಿ ಚುನಾವಣೆ ನಡೆಯಲೇಬೇಕೆಂದು ತಿಳಿಸಿದೆ.
ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್ ಚಿನ್ನಪ್ಪ, ಇತರ ಹಿಂದುಳಿದ ವರ್ಗ (ಒಬಿಸಿ)ಕ್ಕೆ ಸೂಕ್ತವಾದ ಮೀಸಲು ಕಲ್ಪಿಸಲು ಸರ್ಕಾರ ಸಿದ್ಧವಿದೆ. ಸುಪ್ರೀಂಕೋರ್ಟ್ ನಿರ್ದೇಶನದಂತೆ 2 ತಿಂಗಳಲ್ಲಿ ಟ್ರಿಪಲ್ ಟೆಸ್ಟ್ ಪ್ರಕಾರವೇ ಒಬಿಸಿಗೆ ವಾರ್ಡ್‌ವಾರು ಮೀಸಲು ಒದಗಿಸುತ್ತೇವೆ ಎಂದು ವಾದ ಮಂಡಿಸಿದರು.