ಬೆಂಗಳೂರು: ಬಿಬಿಎಂಪಿಯ ವಾರ್ಡ್‌ಗಳಿಗೆ ಮೀಸಲಾತಿ ನಿಗದಿಪಡಿಸಿ ರಾಜ್ಯ ಸರಕಾರದ ನಗರಾಭಿವೃದ್ಧಿ ಇಲಾಖೆ ಹೊರಡಿಸಿದ್ದ ಅಧಿಸೂಚನೆ ರದ್ದು ಕೋರಿದ್ದ ತಕರಾರು ಅರ್ಜಿಗೆ ಸಂಬಂಧಿಸಿದಂತೆ ಸಪ್ಟೆಂಬರ್ 12ರೊಳಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಸೂಚಿಸಿದೆ.
ಕೆ.ಮಹದೇವ ಎಂಬುವವರು ಸಲ್ಲಿಸಿರುವ ಅರ್ಜಿಯನ್ನು ನ್ಯಾ. ಹೇಮಂತ್ ಚಂದನಗೌಡರ್ ಅವರಿದ್ದ ಏಕ ಸದಸ್ಯಪೀಠ ಶುಕ್ರವಾರ ವಿಚಾರಣೆ ನಡೆಸಿ ಆಕ್ಷೇಪಣೆಗಳನ್ನು ಸಲ್ಲಿಸಲು ಆದೇಶಿಸಿ ಮುಂದಿನ ವಿಚಾರಣೆ ಸಪ್ಟೆಂಬರ್ 12 ಕ್ಕೆ ಮುಂದೂಡಿದೆ.
ವಾರ್ಡ್ ವಾರು ಮೀಸಲಾತಿ ನಿಗದಿಯಲ್ಲಿನ ಲೋಪದೋಷಗಳನ್ನು ಕೋರ್ಟ್ ಗಮನಕ್ಕೆ ತಂದ ಅರ್ಜಿದಾರರು, ಬಿಬಿಎಂಪಿ ವಾರ್ಡ್‌ವಾರು ಮೀಸಲಾತಿ ನಿಗದಿಯಲ್ಲಿ ನಿಯಮ ಪಾಲನೆಯಾಗಿಲ್ಲವೆಂದು ಆರೋಪಿಸಿದ್ದಾರೆ. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಸಂಬಂಧ ಭಕ್ತವತ್ಸಲ ಸಮಿತಿ ನೀಡಿರುವ ವರದಿ ಆಧರಿಸಿ ಮೀಸಲಾತಿ ಕಲ್ಪಿಸಲಾಗಿದೆ ಎಂದು ಸರ್ಕಾರ ಹೇಳಿದೆ.