ಬೆಂಗಳೂರು: ಬಿಬಿಎಂಪಿ ವಾರ್ಡ್ ವಿಂಗಡಣೆ ವೈಜ್ಞಾನಿಕವಾಗಿ ನಡೆದಿದೆ. ಈ ಬಗ್ಗೆ ಕೋರ್ಟ್ ಮೋರೆ ಹೋಗುವ ಅಗತ್ಯ ಇಲ್ಲ ಎಂದು ಸಚಿವ ಅಶ್ವತ್ಥ ನಾರಾಯಣ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಇರುವ ಕಡೆ ವಾರ್ಡ್ ಕಡಿಮೆ ಮಾಡಲಾಗಿದೆ, ಬಿಜೆಪಿ ಇರುವ ಕಡೆ ವಾರ್ಡ್ ಹೆಚ್ಚು ಮಾಡಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಆಕ್ಷೇಪಣೆ ಇದ್ದಲ್ಲಿ, ಆಕ್ಷೇಪಣೆ ಸಲ್ಲಿಸಬಹುದು. 15 ದಿನದಲ್ಲಿ ಆಕ್ಷೇಪಣೆ ಕೊಡಬಹುದು. ಕಾನೂನು ಹೋರಾಟ ಮಾಡುವ ಅವಶ್ಯಕತೆ ಇಲ್ಲ. ಏನೇ ಇದ್ದರೂ ಕಾನೂನಾತ್ಮಕವಾಗಿ ಇಲ್ಲಿಯೇ ಸರಿಪಡಿಸೋಣ ಎಂದು ಹೇಳಿದ್ದಾರೆ.
ಎಸ್.ಎಂ.ಕೃಷ್ಣ ಭೇಟಿ:ಸಚಿವ ಅಶ್ವತ್ಥ್ ನಾರಾಯಣ್ ಸದಾಶಿವನಗರದಲ್ಲಿರುವ ಎಸ್.ಎಂ.ಕೃಷ್ಣ ಅವರ ಮನೆಗೆ ಭೇಟಿ ನೀಡಿ, ಕೆಂಪೇಗೌಡರ ಹೆಸರಲ್ಲಿ ಪ್ರಶಸ್ತಿ ನೀಡುವ ಬಗ್ಗೆ ಚರ್ಚೆ ನಡೆಸಿದರು. ಬಳಿಕ ಮಾತನಾಡಿದ ಅವರು, ಜೂನ್ 27ರಂದು ನಾಡಪ್ರಭು ಕೆಂಪೇಗೌಡರ ಜನ್ಮದಿನವಾಗಿದೆ. ಇವರ ಜನ್ಮದಿನಾಚರಣೆ ಪ್ರಯುಕ್ತ ಕರ್ನಾಟಕ ಸರ್ಕಾರ ಅಂತಾರಾಷ್ಟ್ರೀಯ ಪ್ರಶಸ್ತಿ ನೀಡಲು ನಿರ್ಧರಿಸಿದೆ. ಇದಕ್ಕಾಗಿ ಮೋಹನ್ ದಾಸ್ ಪೈ, ಬಾಲಸುಬ್ರಹ್ಮಣ್ಯಂ, ಶಂಕರಲಿಂಗೇಗೌಡರನ್ನು ಒಳಗೊಂಡ ಸದಸ್ಯರ ಸಮಿತಿ ರಚಿಸಲಾಗಿತ್ತು. ಈ ಬಾರಿ ಮೂರು ಜನರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಮಾಡಲು ನಿರ್ಧರಿಸಲಾಗಿದೆ. ಮಾಜಿ ಸಿಎಂ ಎಸ್.ಎಂ.ಕೃಷ್ಣ, ಇನ್ಫೋಸಿಸ್ ನಾರಾಯಣ ಮೂರ್ತಿ ಹಾಗೂ ಕ್ರೀಡಾಪಟು ಪ್ರಕಾಶ್ ಪಡುಕೋಣೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.