ಕರ್ನಾಟಕ

karnataka

By

Published : Aug 3, 2019, 6:12 AM IST

ETV Bharat / state

ಬಿಬಿಎಂಪಿಯಲ್ಲೂ ಕುಸಿದ ಮೈತ್ರಿ ಬಲ: ಆಡಳಿತ ಚುಕ್ಕಾಣಿ ಹಿಡಿಯುತ್ತಾ ಬಿಜೆಪಿ?

ರಾಜ್ಯದಲ್ಲಿ ದೋಸ್ತಿ ಸರ್ಕಾರದ ಪತನ ಮತ್ತು ಕೆಲ ಶಾಸಕರು ಅನರ್ಹಗೊಂಡ ಹಿನ್ನೆಲೆ ಬಿಬಿಎಂಪಿಯಲ್ಲೂ ಕಾಂಗ್ರೆಸ್-ಜೆಡಿಸ್ ಮೈತ್ರಿ ಬಲ ಕುಸಿದಿದೆ ಎನ್ನಲಾಗ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಮೇಯರ್ ಸ್ಥಾನ ಬಿಜೆಪಿ ಪಾಲಾಗುವ ಎಲ್ಲಾ ಸಾಧ್ಯತೆಗಳಿವೆ. ಇದರಿಂದಾಗಿ ಬಲ ಕಳೆದುಕೊಂಡಿರುವ ಮೈತ್ರಿ ಪಕ್ಷಗಳು ಬಿಬಿಎಂಪಿಯಲ್ಲೂ ಅಧಿಕಾರ ಕಳೆದುಕೊಳ್ಳುವ ಹಂತಕ್ಕೆ ತಲುಪಿವೆ.

ಬಿಬಿಎಂಪಿಯಲ್ಲೂ ಬಿಜೆಪಿ ಆಡಳಿತ ಪಕ್ಕ- ಕೈಚೆಲ್ಲಿ ಕುಳಿತಿದೆಯಾ ಕಾಂಗ್ರೆಸ್!?

ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಬಿಜೆಪಿ ಆಡಳಿತದ ಗದ್ದುಗೆ ಹಿಡಿಯುತ್ತಿದ್ದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲೂ ಇನ್ನೆರಡು ತಿಂಗಳಲ್ಲಿ ಮೈತ್ರಿ ಆಡಳಿತವನ್ನು ಕೊನೆಗೊಳಿಸಿ ಆಡಳಿತ ಹಿಡಿಯುವ ಹುಮ್ಮಸ್ಸಿನಲ್ಲಿದೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಡಳಿತದ ನಾಲ್ಕನೇ ಅವಧಿಯ ಮೇಯರ್ ಅವಧಿ ಸೆಪ್ಟಂಬರ್​ 28 ಕ್ಕೆ ಕೊನೆಯಾಗಲಿದೆ. ಆದರೆ ಕೊನೆಯ ಐದನೇ ವರ್ಷದ ಆಡಳಿತವೂ ನಮ್ಮದೇ ಎಂದುಕೊಂಡಿದ್ದ ಮೈತ್ರಿಪಕ್ಷದ ಕನಸು ಭಗ್ನವಾಗಿದೆ. ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬರುತ್ತಿದ್ದಂತೆಯೇ ಬಿಬಿಎಂಪಿಯಲ್ಲೂ ಅಧಿಕಾರಕ್ಕೇರಲು ವೇದಿಕೆ ಸಜ್ಜುಗೊಳಿಸಿದೆ.

ಈಗಾಗಲೇ ಬೆಂಗಳೂರು ವ್ಯಾಪ್ತಿಯ ಐವರು ಶಾಸಕರು ಕಾಂಗ್ರೆಸ್​ನಿಂದ ಹೊರಬಂದಿರುವುದರಿಂದ ಮೈತ್ರಿ ಪಕ್ಷಕ್ಕೆ ಐದು ಸಂಖ್ಯಾಬಲ ಕಡಿಮೆಯಾಗಲಿದೆ. ಅಲ್ಲದೆ ಅವರ ಬೆಂಬಲಿಗ ಕಾರ್ಪೋರೇಟರುಗಳು ಕೂಡಾ ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಇಷ್ಟೇ ಅಲ್ಲದೆ ಈಗಾಗಲೇ ಆರು ಜನ ಪಕ್ಷೇತರ ಶಾಸಕರು ಹಾಗೂ ಕೆಲ ಜೆಡಿಎಸ್ ನ ಅತೃಪ್ತ ಶಾಸಕರನ್ನು ಬಿಜೆಪಿಗೆ ಕರೆತರುವ ಸಿದ್ಧತೆ ತೆರೆಮರೆಯಲ್ಲಿ ನಡೆದಿದೆ ಎನ್ನಲಾಗ್ತಿದೆ. ಹೀಗಾಗಿ 136 ಇದ್ದ ಮೈತ್ರಿ ಪಕ್ಷದ ಬಲ 120 ಕ್ಕೆ ಕುಸಿದು, 126 ಇದ್ದ ಬಿಜೆಪಿ ಬಲ, 137 ಕ್ಕೆ ಏರುವ ಸಾಧ್ಯತೆಯಿದೆ.

ನಗರದಲ್ಲಿ ಬಿಜೆಪಿಯಲ್ಲಿ 102 ಪಾಲಿಕೆ ಸದಸ್ಯರು, , ಕಾಂಗ್ರೆಸ್ ನಲ್ಲಿ 76, ಜೆಡಿಎಸ್ ನಲ್ಲಿ 14 ಶಾಸಕರು ಇದ್ದರೂ ಈವರೆಗೆ ಅತಿಹೆಚ್ಚು ಸ್ಥಾನಗಳಲ್ಲಿ ಗೆದ್ದಿದ್ದ ಬಿಜೆಪಿಗೆ ಆಡಳಿತ ನಡೆಸಲು ಸಾಧ್ಯವಾಗಿರಲಿಲ್ಲ. ನಗರ ವ್ಯಾಪ್ತಿಯ ಶಾಸಕರು, ಸಂಸದರು, ಪಕ್ಷೇತರರು ಹಾಗೂ ಜೆಡಿಎಸ್ ರವರನ್ನೂ ಸೇರಿಸಿ ಕಾಂಗ್ರೆಸ್ ಆಡಳಿತ ನಡೆಸಿತ್ತು‌. ಆದರೆ ಕಾಂಗ್ರೆಸ್-ಜೆಡಿಎಸ್ ಶಾಸಕರು ಅನರ್ಹ ಆಗಿರುವುದರಿಂದ ಮೈತ್ರಿ ಪಕ್ಷದ ಬಲ ಕುಗ್ಗಿ ಪಕ್ಷದ ಬಲಾಬಲ ಕಡಿಮೆಯಾಗಲಿದೆ. ಇಷ್ಟೆಲ್ಲಾ ಸಂಖ್ಯಾಬಲದ ಕೊರತೆ ಆಗುವುದರಿಂದ ಬಿಜೆಪಿಗೆ ಕಡೆಯ ವರ್ಷದ ಆಡಳಿತ ಬಿಟ್ಟುಕೊಡಲು ಕಾಂಗ್ರೆಸ್ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಪ್ರತಿಪಕ್ಷದ ಪಕ್ಷದ ನಾಯಕ ಹಾಗೂ ಮೇಯರ್ ಸ್ಥಾನದ ಪ್ರಬಲ ಆಕಾಂಕ್ಷಿ ಪದ್ಮನಾಭ ರೆಡ್ಡಿ ಅವರು, ಕಾಂಗ್ರೆಸ್ -ಜೆಡಿಎಸ್ ಬೋಗಸ್ ವೋಟ್ ಸೇರಿಸಿದರೂ ಈ ಬಾರಿ ಚುನಾವಣೆ ಗೆಲ್ಲುವ ಪರಿಸ್ಥಿತಿಯಲ್ಲಿಲ್ಲ. ಐದನೇ ಚುನಾವಣೆಯಲ್ಲಿ ಬಿಜೆಪಿಯೇ ಆಡಳಿತ ನಡೆಸಲಿದೆ. ಅಲ್ಲದೆ ಜೆಡಿಎಸ್ ಪಕ್ಷದಿಂದಲೂ ಅಸಮಾಧಾನ ಇರುವವರು ನಮ್ಮ ಪಕ್ಷಕ್ಕೆ ಬರಲಿದ್ದಾರೆ. ಪಕ್ಷೇತರರೂ ಬೆಂಬಲ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನು, ಕಾಂಗ್ರೆಸ್ ಆಡಳಿತ ಪಕ್ಷದ ನಾಯಕ ವಾಜಿದ್ ಮಾತನಾಡಿ, ನಾವೂ ಆಪರೇಷನ್ ಹಸ್ತ ಮಾಡುತ್ತೇವೆ. ಸುಮಾರು 20 ಕಾರ್ಪೋರೇಟರ್ಸ್ ನಮ್ಮ ಪಕ್ಷಕ್ಕೆ ಬೆಂಬಲ ನೀಡುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಈಗಾಗಲೇ ಮಾತುಕತೆ ನಡೆದಿದೆ. ಈವರೆಗೆ ಬಿಜೆಪಿಗೆ ಅಧಿಕಾರ ಮಾಡುವುದಕ್ಕೆ ಆಗಿಲ್ಲ. ಈ ಹಿಂದಿನಂತೆಯೇ ಐದನೇ ವರ್ಷವೂ ನಾವೇ ಅಧಿಕಾರ ನಡೆಸುತ್ತೇವೆ. ಅಲ್ಲದೆ ಬಿಜೆಪಿಯಲ್ಲೇ ಮೇಯರ್ ಯಾರಾಗಬೇಕೆಂಬ ಗೊಂದಲ ಇದೆ. ಈ ಎಲ್ಲಾ ಗೊಂದಲ ಕಾಂಗ್ರೆಸ್​ಗೆ ಲಾಭದಾಯಕವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಿನಲ್ಲಿ ಏನೇ ಕಸರತ್ತು ನಡೆಸಿದರೂ ಬಿಜೆಪಿಯ ಸಂಖ್ಯಾಬಲದ ಮುಂದೆ ಕಾಂಗ್ರೆಸ್ ಕುಗ್ಗುವ ಸಾಧ್ಯತೆಯಿದೆ. ಅಲ್ಲದೆ ಹಲವು ಬಂಡಾಯ ಸದಸ್ಯರು ಈಗಾಗಲೇ ಬಿಜೆಪಿ ಜೊತೆ ಗುರುತಿಸಿಕೊಂಡಿರುವುದರಿಂದ ಈ ಬಾರಿಯ ಚುನಾವಣೆಯಲ್ಲಿ ಮೇಯರ್ ಸ್ಥಾನ ಹಾಗೂ ಪಾಲಿಕೆ ಆಡಳಿತ ಬಿಜೆಪಿಗೆ ಪಕ್ಕಾ ಅನ್ನೋದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

For All Latest Updates

ABOUT THE AUTHOR

...view details