ಕರ್ನಾಟಕ

karnataka

ETV Bharat / state

ಅಕ್ರಮ 'ಎ' ಖಾತಾ ಪ್ರಮಾಣಪತ್ರಗಳ ಕುರಿತು ತನಿಖೆ ನಡೆಸಲು ಮುಂದಾದ ಬಿಬಿಎಂಪಿ

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಅಕ್ರಮವಾಗಿ ಎ ಖಾತಾ ಪ್ರಮಾಣಪತ್ರ ನೀಡುತ್ತಿರುವ ಬಗ್ಗೆ ತನಿಖೆ ನಡೆಸಲು ಬಿಬಿಎಂಪಿ ಮುಂದಾಗಿದೆ.

bbmp-to-investigate-irregularities in-a-khata-certificates
ಅಕ್ರಮ 'ಎ' ಖಾತಾ ಪ್ರಮಾಣಪತ್ರಗಳ ಕುರಿತು ತನಿಖೆ ನಡೆಸಲು ಮುಂದಾದ ಪಾಲಿಕೆ

By ETV Bharat Karnataka Team

Published : Aug 26, 2023, 4:16 PM IST

ಬೆಂಗಳೂರು :ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿ ಅಕ್ರಮ 'ಎ' ಖಾತಾ ಪ್ರಮಾಣಪತ್ರಗಳನ್ನು ನೀಡುತ್ತಿರುವ ಕುರಿತು ತನಿಖೆ ನಡೆಸಲು ಪಾಲಿಕೆ ಮುಂದಾಗಿದೆ. ಪಾಲಿಕೆಯ ಮೂಲಗಳ ಮಾಹಿತಿ ಪ್ರಕಾರ, ಎಲ್ಲಾ ವಾರ್ಡ್‌ಗಳು 'ಬಿ' ಆಸ್ತಿಗಳಿಗೆ 'ಎ' ಖಾತಾ ನೀಡಲಾಗಿರುವ ಬಗ್ಗೆ ತನಿಖೆ ಆರಂಭವಾಗುತ್ತಿದೆ. ಆರ್‌ಆರ್ ನಗರ ವಲಯದಲ್ಲಿ ಕಾರ್ಯಾಚರಣೆ ಪ್ರಾರಂಭವಾಗಿದೆ.

ಇತ್ತೀಚೆಗೆ ಪಾಲಿಕೆ ಅಧಿಕಾರಿಗಳು ಅಂಜನಾಪುರದ ಬಿಬಿಎಂಪಿಯ ಕಂದಾಯ ಉಪ ಇಲಾಖೆಗೆ ಭೇಟಿ ನೀಡಿ ಅಕ್ರಮ 'ಎ'ಖಾತಾ ನೀಡಿರುವ 2 ವಾರ್ಡ್​ಗಳ ದಾಖಲೆಗಳನ್ನು ಪರಿಶೀಲಿಸಿದ್ದರು. ಈ ವೇಳೆ 698 ಅಕ್ರಮ 'ಎ' ಖಾತಾ ನೀಡಲಾಗಿದೆ ಎಂದು ತಿಳಿದುಬಂದಿತ್ತು.

ಸಹಾಯಕ ಕಂದಾಯ ಅಧಿಕಾರಿಗಳು ಮತ್ತು ಕಂದಾಯ ಅಧಿಕಾರಿಗಳು ಅಕ್ರಮವಾಗಿ 'ಬಿ' ಖಾತಾಗಳನ್ನು 'ಎ' ಖಾತಾಗಳಾಗಿ ಪರಿವರ್ತಿಸಿದ್ದಾರೆ ಎಂಬ ಆರೋಪದ ಹಿನ್ನೆಲೆ ತನಿಖೆ ನಡೆಸಲು ಮುಂದಾಗಿದ್ದೇವೆ. ಪಾಲಿಕೆಯ ಇತ್ತೀಚಿನ ಆದೇಶದ ಪ್ರಕಾರ ಅಕ್ರಮ 3,666 'ಎ' ಖಾತಾಗಳನ್ನು 'ಬಿ' ಖಾತಾಗಳಾಗಿ ಮರುಪರಿವರ್ತಿಸಬೇಕಿದೆ. ಅಕ್ರಮ 'ಎ' ಖಾತಾಗಳಿಗೆ ಸಂಬಂಧಿಸಿದಂತೆ ಹಲವು ದೂರುಗಳು ಬಂದಿವೆ. ಇವುಗಳಲ್ಲಿ 45,000 ಆಸ್ತಿಗಳನ್ನು 'ಬಿ' ಖಾತಾದಿಂದ 'ಎ' ಖಾತಾಗೆ ಪರಿವರ್ತಿಸಲಾಗಿದೆ ಎಂದು ಗಮನಕ್ಕೆ ಬಂದಿದೆ ಎಂದು ಹಣಕಾಸು ವಿಶೇಷ ಆಯುಕ್ತ ಜಯರಾಮ್ ರಾಯಪುರ ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಅಂತಹ ಶೇ. 90ಕ್ಕೂ ಹೆಚ್ಚು ಆಸ್ತಿಗಳನ್ನು ಅಕ್ರಮವಾಗಿ ಪರಿವರ್ತಿಸಲಾಗಿದೆ. ಹೀಗಾಗಿ ಅಂತಹ ಎಲ್ಲಾ ಆಸ್ತಿಗಳನ್ನು ಮರುಪರಿಶೀಲಿಸುವಂತೆ ಆದೇಶಿಸಲಾಗುತ್ತಿದೆ. ಪಾಲಿಕೆ ಕಂದಾಯ ಅಧಿಕಾರಿಗಳ ಪಾತ್ರದ ಬಗ್ಗೆಯೂ ತನಿಖೆ ನಡೆಸಲಾಗುತ್ತದೆ. ತಪ್ಪಿತಸ್ಥರೆಂದು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಬಿ ಖಾತಾ ಆಸ್ತಿಗಳಿಗೆ ಎ ಖಾತಾ ನೀಡಿದ್ದರೆ ಅಕ್ರಮ: ಬಿ ಖಾತಾ ಆಸ್ತಿಗಳಿಗೆ ಎ ಖಾತಾ ನೀಡಿದ್ದರೆ ಆ ಆಸ್ತಿಗಳಲ್ಲಿ ನಿರ್ಮಿಸಲಾದ ಕಟ್ಟಡಗಳಿಗೆ ನೀಡಲಾದ ಸ್ವಾಧೀನ ಪತ್ರ, ನಕ್ಷೆಗಳು ಅಕ್ರಮ ಎಂದಾಗಲಿದೆ. ಹೀಗಾಗಿ ಅವುಗಳನ್ನೂ ರದ್ದು ಮಾಡಬೇಕಿದ್ದು, ಅವುಗಳ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುವುದು. ಜೊತೆಗೆ ಅಕ್ರಮವಾಗಿ ಖಾತಾ ನೀಡಿರುವ ಅಧಿಕಾರಿ, ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹಣಕಾಸು ವಿಶೇಷ ಆಯುಕ್ತ ಜಯರಾಮ್ ರಾಯಪುರ ಅವರು ತಿಳಿಸಿದ್ದರು.

ಇನ್ನು, ಬೆಂಗಳೂರು ಮಹಾನಗರದ 8 ವಲಯಗಳ ವ್ಯಾಪ್ತಿಯಲ್ಲಿ ಅಕ್ರಮವಾಗಿ 9736 ಎ ಖಾತಾ ನೀಡಿರುವ ಬಗ್ಗೆ ಮಾಹಿತಿ ನೀಡುವಂತೆ ಬಿಬಿಎಂಪಿಗೆ ಹೈಕೋರ್ಟ್​ ಸೂಚನೆ ನೀಡಿದೆ.

ಇದನ್ನೂ ಓದಿ :ಬೆಂಗಳೂರಲ್ಲಿ ಅಕ್ರಮವಾಗಿ 9736 ಎ ಖಾತೆ ನೀಡಿದ ಬಗ್ಗೆ ಮಾಹಿತಿ ನೀಡುವಂತೆ ಬಿಬಿಎಂಪಿಗೆ ಹೈಕೋರ್ಟ್ ಸೂಚನೆ

ABOUT THE AUTHOR

...view details