ಬೆಂಗಳೂರು : ನಗರದಲ್ಲಿ ಹೊಸ ವರ್ಷಾಚರಣೆಗೆ ಕೆಲವು ನಿಯಮಗಳನ್ನು ಜಾರಿಗೆ ತರಲು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಹೊಟೇಲ್ ಅಸೋಸಿಯೇಷನ್, ಪಬ್ ಅಂಡ್ ಕ್ಲಬ್, ಬಾರ್ ಅಸೋಸಿಯೇಷನ್, ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗಳ ಜತೆ ವರ್ಚುವಲ್ ಸರಣಿ ಸಭೆ ನಡೆಸಿದ್ದಾರೆ. ರಾಜ್ಯದಲ್ಲಿ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ. ರಾಜ್ಯಾದ್ಯಂತ ಇಂದಿನಿಂದ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.
ಈ ಬಗ್ಗೆ ಮಾತನಾಡಿರುವ ಸಚಿವ ಆರ್ ಅಶೋಕ್, ರಾಜ್ಯದಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಮಾಸ್ಕ್ ಧರಿಸದಿದ್ದರೆ ಸದ್ಯಕ್ಕೆ ದಂಡ ವಿಧಿಸಲಾಗುವುದಿಲ್ಲ. ಆದರೆ, ಜನರ ಹಿತದೃಷ್ಟಿಯಿಂದ ಮುನ್ನೆಚ್ಚರಿಕೆ ವಹಿಸಿ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಹೇಳಿದರು.
ಎಲ್ಲಾ ಸಿನಿಮಾ ಥಿಯೇಟರ್ಗಳು, ಮಾಲ್ಗಳು, ಹೋಟೆಲ್, ರೆಸ್ಟೋರೆಂಟ್, ಒಳಾಂಗಣ ಕಾರ್ಯಕ್ರಮ, ಸಾರ್ವಜನಿಕ ಸ್ಥಳಗಳು, ಸಭೆ, ಸಮಾರಂಭ, ಶಾಲಾ-ಕಾಲೇಜುಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಲು ಸೂಚಿಸಲಾಗಿದೆ. ರಾಜ್ಯದ ಎಲ್ಲ ಹೋಟೆಲ್, ಪಬ್, ಬಾರ್, ರೆಸ್ಟೋರೆಂಟ್ ಹಾಗೂ ರೆಸಾರ್ಟ್ಗಳಲ್ಲಿನ ಮಾಲೀಕರು ಹಾಗೂ ಸಿಬ್ಬಂದಿಗೆ ಮಾಸ್ಕ್ ಹಾಗೂ 2 ಡೋಸ್ ಲಸಿಕೆ ಕಡ್ಡಾಯ ಮಾಡಲಾಗಿದೆ. ಹೊಟೇಲ್, ಪಬ್, ರೆಸ್ಟೋರೆಂಟ್ಗಳಲ್ಲಿ ಈಗಿರುವಷ್ಟೇ ಸೀಟ್ಗಳಿಗೆ ಮಾತ್ರ ಜನರಿಗೆ ಅವಕಾಶ ನೀಡಬೇಕು. ಹೊಸದಾಗಿ ಹೆಚ್ಚುವರಿ ಸೀಟ್ಗಳ ವ್ಯವಸ್ಥೆ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ.