ಬೆಂಗಳೂರು:ಪ್ರತೀ ವರ್ಷ ಮಳೆಗಾಲದಲ್ಲಿ ಉಂಟಾಗುಯತ್ತಿರುವ ಮಳೆಹಾನಿ, ಅನಾಹುತಗಳನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲ. ಇದೀಗ ಬಿಬಿಎಂಪಿಯ ಕೆರೆಗಳ ವಿಭಾಗ ಇದಕ್ಕೆ ನೂತನ ಯೋಜನೆಯ ಬಗ್ಗೆ ಚಿಂತಿಸಿದೆ.
ಮಳೆಗಾಲದಲ್ಲಿ ಕೆರೆಗಳಲ್ಲಿ ನೀರು ತುಂಬಿ ಕೋಡಿ ಒಡೆಯುವುದು, ಸುತ್ತಲಿನ ಪ್ರದೇಶಗಳು ಜಲಾವೃತವಾಗುವುದನ್ನು ತಪ್ಪಿಸಲು ಕೆಲ ಆಯ್ದ ಕೆರೆಗಳಲ್ಲಿ ಮಳೆಗಾಲಕ್ಕೂ ಮುನ್ನ ಶೇ. 50ರಷ್ಟು ನೀರು ಖಾಲಿ ಮಾಡುವ ಯೋಜನೆ ಬಗ್ಗೆ ಬಿಬಿಎಂಪಿ ಚಿಂತನೆ ನಡೆಸಿದೆ.
ನಗರದ ಮಳೆ ಪ್ರಮಾಣ ಇಂತಿಷ್ಟೇ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ಎಲ್ಲಾ ಕೆರೆಗಳ ಶೇ. 50ರಷ್ಟು ನೀರು ಖಾಲಿ ಮಾಡುವ ಬದಲು ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಅಳವಡಿಸಿರುವ ಕೆರೆಗಳಿಗೆ ಮಾತ್ರ ಈ ಯೋಜನೆ ಅನ್ವಯಿಸುತ್ತದೆ. ಒಂದು ವೇಳೆ ಮಳೆ ಬಾರದಿದ್ದರೂ ಎಸ್ಟಿಪಿಯ ಸಂಸ್ಕರಿಸಿದ ನೀರು ಕೆರೆ ಸೇರುತ್ತದೆ. ಇದರಿಂದ ಕೆರೆ ನೀರು ಖಾಲಿಯಾಗದಂತೆ ಸಮತೋಲನ ಕಾಪಾಡಿಕೊಳ್ಳಬಹುದಾಗಿದೆ. ಹೀಗಾಗಿ ಈ ಯೋಜನೆ ಬಗ್ಗೆ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಚಿಂತನೆ ನಡೆಸಿದೆ.
ಆದರೆ ಈ ಬಗ್ಗೆ ಮಿಶ್ರ ಪ್ರತಿಕ್ರಿಯೆ ಇದ್ದು, ಇನ್ನೂ ಅಂತಿಮ ತೀರ್ಮಾನ ಆಗಿಲ್ಲ ಎಂದು ಬಿಬಿಎಂಪಿ ಕೆರೆಗಳ ವಿಭಾಗದ ಚೀಫ್ ಎಂಜಿನಿಯರ್ ಬಿ.ಟಿ.ಮೋಹನ್ ಕೃಷ್ಣ ತಿಳಿಸಿದ್ದಾರೆ. ಎಸ್ಟಿಪಿ ಇರುವ ಪ್ರಮುಖ ಕೆರೆಗಳು - ಕಲ್ಕೆರೆ, ಉತ್ತರಹಳ್ಳಿ, ಮಡಿವಾಳ, ಅಗರ, ಅಲ್ಲಾಳಸಂದ್ರ, ರಾಚೇನಹಳ್ಳಿ, ದೊರೆಕೆರೆ, ಮಹದೇವಪುರ ಕೆರೆ, ಕೂಡ್ಲು ಚಿಕ್ಕೆರೆಗಳಲ್ಲಿ ಎಸ್ಟಿಪಿ ಅಳವಡಿಸಲಾಗಿದೆ.
ಕೆರೆಗಳ ನೀರು ಖಾಲಿ ಮಾಡುವುದರ ಜೊತೆಗೆ ಈ ನೀರನ್ನು ಬೇರೆ ಕೆರೆಗಳಲ್ಲಿ ಸಂರಕ್ಷಿಸಲು ಸಾಧ್ಯವಿದೆಯೇ ಅಥವಾ ಹೊರ ಹರಿಬಿಟ್ಟಾಗ ಕೆರೆ ಭಾಗದಲ್ಲಿ ಅನಾಹುತ ತಪ್ಪಿಸುವ ಬಗ್ಗೆಯೂ ವ್ಯವಸ್ಥೆ, ಸಿದ್ಧತೆಗಳ ಬಗ್ಗೆ ಪಾಲಿಕೆ ಚರ್ಚೆ ನಡೆಸುತ್ತಿದೆ.