ಬೆಂಗಳೂರು:ರಾಜ್ಯದಲ್ಲಿ ಕೋವಿಡ್-19 ಸೋಂಕು 105 ಜನರಲ್ಲಿ ದೃಢಪಟ್ಟಿದೆ. ಆದರೆ ಕೇವಲ ಬೆಂಗಳೂರಲ್ಲಿ ಅರ್ಧದಷ್ಟು ಅಂದ್ರೆ 45 ಜನರಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದೆ.
ಸಾವಿರಾರು ಜನ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಇಷ್ಟು ದೊಡ್ಡಮಟ್ಟದ ಸವಾಲನ್ನು ಎದುರಿಸೋಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಮರ್ಥ ತಂಡವೊಂದನ್ನು ಸಿದ್ದಪಡಿಸಿದೆ. ರಾಜ್ಯಸರ್ಕಾರದ ಟಾಸ್ಕ್ ಫೋರ್ಸ್ ಒಂದೆಡೆಯಾದ್ರೆ, ಬಿಬಿಎಂಪಿ ತನ್ನ ಡಾಕ್ಟರ್ಸ್, ಅಧಿಕಾರಿಗಳು, ಸಿಬ್ಬಂದಿ ಅಷ್ಟೇ ಅಲ್ಲದೆ ನಗರದ ನಾಗರಿಕರನ್ನು ಒಟ್ಟು ಸೇರಿಸಿ ವೈರಸ್ ಹೊಡೆದೋಡಿಸಲು ಹೋರಾಡುತ್ತಿದೆ. ತಮ್ಮ ಆರೋಗ್ಯದ ಜೊತೆಗೆ ಬೆಂಗಳೂರು ನಾಗರಿಕರ ಆರೋಗ್ಯಕ್ಕಾಗಿ ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ, ಸ್ಟಾಂಪಿಂಗ್, ಮಾರ್ಗದರ್ಶನ ನೀಡಲು ತಂಡೋಪತಂಡವಾಗಿ ಕಾರ್ಯ ನಿರ್ವಹಿಸುತ್ತಿದೆ.
ಮೆಡಿಕಲ್ ಕಾಲೇಜಿನ 300 ಜನ ವಿದ್ಯಾರ್ಥಿ ಸಿಬ್ಬಂದಿಗಳು ಪಾಲಿಕೆ ಜೊತೆ ಕೈಜೋಡಿಸಿದ್ದಾರೆ. ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ 1500 ನಾಗರಿಕರು, ಬೆಂಗಳೂರು ಅಪಾರ್ಟ್ ಮೆಂಟ್ ಫೆಡರೇಶನ್ ನ 700 ಜನ, ಜೊತೆಗೆ ಜನಾಗ್ರಹ, ನಮ್ಮ ಬೆಂಗಳೂರು ಫೌಂಡೇಶನ್ ನಂತಹ ಎನ್‌ಜಿಒಗಳು ಈಗಾಗಲೇ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಕೋವಿಡ್-19 ಕುರಿತ ಜನಜಾಗೃತಿಗೆ ಸಹಾಯಹಸ್ತ ಚಾಚುತ್ತಿದ್ದಾರೆ. ಗೃಹ ಬಂಧನದಲ್ಲಿರುವರು ಮನೆಯಿಂದ ಹೊರಬಾರದಂತೆ ಆ ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಪೂರೈಸಲು ಸಹ ಕೈಜೋಡಿಸಿದ್ದಾರೆ. ಪಾಲಿಕೆ ಆರಂಭಿಸಿರುವ ಫೀವರ್ ಕ್ಲಿನಿಕ್‌ನ ಮಾಹಿತಿಗಳನ್ನು, ಸರ್ಕಾರದ ನಿರ್ದೇಶನಗಳನ್ನೂ ಜನರಿಗೆ ಮುಟ್ಟಿಸುತ್ತಿದ್ದಾರೆ.
ಈ ಬಗ್ಗೆ ಈಟಿವಿ ಭಾರತ್ ಜೊತೆ ಮಾತನಾಡಿದ ಅಪಾರ್ಟ್ ಮೆಂಟ್ ಫೆಡರೇಷನ್ ಕಾರ್ಯದರ್ಶಿ ವಿಕ್ರಂ ರೈ, ನಮ್ಮಲ್ಲಿ 720 ಅಪಾರ್ಟ್‌ಮೆಂಟ್ ಗಳ 1 ಲಕ್ಷದ 30 ಸಾವಿರ ಜನರೊಂದಿಗೆ ಸಂಪರ್ಕದಲ್ಲಿದ್ದೇವೆ. ನಮ್ಮದೇ ಆದ ಟಾಸ್ಕ್ ಫೋರ್ಸ್ ಮಾಡಿ ಜನರಿಗೆ ಅಗತ್ಯ ಮಾರ್ಗಸೂಚಿ, ಅಗತ್ಯ ವಸ್ತು ಸರಕುಗಳ ಪೂರೈಕೆಗೆ ನೆರವಾಗುತ್ತಿದ್ದೇವೆ ಎಂದರು.
ಇನ್ನು ಜನಾಗ್ರಹ ಸಂಸ್ಥೆಯ ಅಧ್ಯಕ್ಷೆ ಸ್ವಪ್ನಾ ಕರೀಮ್ ಮಾತನಾಡಿ, ಬೆಂಗಳೂರು ಪೊಲೀಸರೊಂದಿಗೆ ಸೇರಿ ಕಮ್ಯುನಿಟಿ ಪೊಲೀಸಿಂಗ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇವೆ. ನಿರ್ಗತಿಕರಿಗೆ, ಕಾರ್ಮಿಕರಿಗೆ ಬೇಕಾದ ಸಹಕಾರ ಕೊರೊನಾ ಕುರಿತ ಅರಿವು ಮೂಡಿಸಲಾಗುತ್ತಿದೆ ಎಂದರು.