ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಸಾಕಷ್ಟು ಬಾರಿ ನೋಟಿಸ್ ಕೊಟ್ಟು ಮನವಿ ಮಾಡಿತ್ತು. ಆದರೆ ಬಾಕಿದಾರರು ಯಾವುದಕ್ಕೂ ಕ್ಯಾರೆ ಅಂದಿರಲಿಲ್ಲ. ಇದೀಗ ಅಂಥವರ ವಿರುದ್ಧ ಅಧಿಕಾರಿಗಳು ಸಮರ ಸಾರಿದ್ದು ಬಾಕಿದಾರರ ಆಸ್ತಿ ಸೀಸ್ ಮಾಡುವ ಮೂಲಕ ಶಾಕ್ ನೀಡಲು ಮುಂದಾಗಿದೆ.
ಹಲವು ವರ್ಷಗಳಿಂದ ಬಿಬಿಎಂಪಿಗೆ ಆಸ್ತಿ ತೆರಿಗೆ ಪಾವತಿ ಮಾಡದವರಿಗೆ ಇದೀಗ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ಈವರೆಗೆ ಸುಮಾರು 10 ಸಾವಿರ ಮಂದಿಗೆ ಆಸ್ತಿ ತೆರಿಗೆ ಪಾವತಿ ಮಾಡದವರಿಗೆ ಬಾಕಿ ತೆರಿಗೆ ಪಾವತಿ ಮಾಡುವಂತೆ ನೋಟಿಸ್ ನೀಡಲಾಗಿದೆ. ಬಿಬಿಎಂಪಿಗೆ ಸುಮಾರು 300 ಕೋಟಿ ರೂಪಾಯಿ ತೆರಿಗೆ ಬರಬೇಕಿದೆ.
ಕಳೆದ ನವೆಂಬರ್ 6ರಂದು ಈ ಕುರಿತಾಗಿ ಬಿಬಿಎಂಪಿ ನಿರ್ಧಾರ ಕೈಗೊಂಡಿತ್ತು. ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಬಿಬಿಎಂಪಿ ವಿಶೇಷ ಆಯುಕ್ತ ತುಷಾರ್ ಗಿರಿನಾಥ್ ಕೂಡ ಅಧಿಕಾರಿಗಳಿಗೆ ಆಸ್ತಿ ತೆರಿಗೆ ವಸೂಲಿಗೆ ಕಠಿಣ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದರು. ಈ ನಿರ್ಧಾರದ ಅನ್ವಯ ಇದೀಗ ಮೊದಲ ಹಂತವಾಗಿ ವಾಣಿಜ್ಯ ಕಟ್ಟಡಗಳಿಗೆ ಪಾಲಿಗೆ ಬೀಗ ಮುದ್ರೆ ಹಾಕಿಸುತ್ತಿದೆ.
ಈಗಾಗಲೇ ನಗರದ ಪ್ರತಿಷ್ಠಿತ ಮಾಲ್ಗಳ ಪೈಕಿ ಒಂದಾದ ಮಂತ್ರಿ ಮಾಲ್ 53 ಕೋಟಿ ರೂ ಬಾಕಿ ತೆರಿಗೆ ಉಳಿಸಿಕೊಂಡ ಕಾರಣ ಬೀಗ ಜಡಿಯಲಾಗಿತ್ತು. ಇತರೆ ವಾಣಿಜ್ಯ ಮಳಿಗೆಗಳಿಗೂ ಬೀಗ ಜಡಿಯುವ ಕೆಲಸ ನಡೆಯುತ್ತಿದೆ. ಎಚ್ಚೆತ್ತುಕೊಂಡು ಬಾಕಿ ಪಾವತಿ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ವಸತಿ ಮನೆಗಳಿಗೂ ಕೂಡ ಬೀಗ ಜಡಿಯುವ ಕೆಲಸ ಮಾಡಲಾಗುತ್ತದೆ ಎನ್ನಲಾಗಿದೆ.
ಬಿಬಿಎಂಪಿ ಮೂಲಗಳ ಪ್ರಕಾರ, ನಗರದಲ್ಲಿ ಒಟ್ಟು 6 ಲಕ್ಷ ಕಟ್ಟಡಗಳು ಆಸ್ತಿ ತೆರಿಗೆಯನ್ನೇ ಕಟ್ಟಿಲ್ಲ. ಬಹುತೇಕರ ಬಾಕಿ ಮೊತ್ತ ಕಡಿಮೆ ಇದೆ. ಆದರೆ, ಕೆಲವರ ಬಾಕಿ ಮೊತ್ತ ತುಂಬಾನೇ ಹೆಚ್ಚಾಗಿದೆ. ಇನ್ನೂ ಕೆಲವು ಆಸ್ತಿಗಳ ಮಾಲೀಕರು ತಮ್ಮ ಆಸ್ತಿಯ ಮಾಹಿತಿಯನ್ನು ಮರೆಮಾಚಿ ಕಡಿಮೆ ಆಸ್ತಿ ತೆರಿಗೆ ಕಟ್ಟುತ್ತಿದ್ದಾರೆ. ಬಿಬಿಎಂಪಿಯ ಎಲ್ಲ ವಲಯಗಳಲ್ಲೂ ಈ ಅಕ್ರಮ ಪತ್ತೆಯಾಗಿದೆ. ಕೆಲವೆಡೆ ಗೃಹ ಬಳಕೆ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ ನಡೆಸಲಾಗುತ್ತಿದೆ. ಇನ್ನೂ ಕೆಲವರು ಎಷ್ಟೋ ವರ್ಷಗಳಿಂದ ಆಸ್ತಿ ತೆರಿಗೆ ಕಟ್ಟುವುದನ್ನೇ ಮರೆತಿದ್ದಾರೆ. ಇವರೆಲ್ಲರ ವಿರುದ್ಧ 2020ರ ಬಿಬಿಎಂಪಿ ಕಾಯ್ದೆ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಇದರ ನಂತರವೂ ಬಾಕಿ ತೆರಿಗೆ ಪಾವತಿ ಮಾಡದಿದ್ದರೂ ಅಂಥವರ ಆಸ್ತಿಯನ್ನು ಹರಾಜು ಹಾಕುವುದಾಗಿ ಬಿಬಿಎಂಪಿ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಜನವರಿ ಕೊನೆಗೆ ಉದ್ಯೋಗ ಮೇಳ: ಸಿದ್ಧತೆಗೆ ಸಚಿವರ ತಂಡ ರಚನೆ