ಬೆಂಗಳೂರು : ನಗರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಬಳ್ಳಾರಿ ರಸ್ತೆಯ ಅಗಲೀಕರಣ ಕಾಮಗಾರಿ ಪ್ರಾರಂಭವಾಗಿದ್ದು ಪ್ರಗತಿಯಲ್ಲಿದೆ. ರಸ್ತೆ ಅಗಲೀಕರಣಕ್ಕಾಗಿ ಎರಡು ಮರಗಳನ್ನು ಸ್ಥಳಾಂತರ ಮಾಡಿದ್ದು, 53 ಮರಗಳನ್ನು ತೆರವುಗೊಳಿಸಲಾಗಿದೆ ಎಂದು ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಬಳ್ಳಾರಿ ರಸ್ತೆ ಅಗಲೀಕರಣ ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಮರ್ಪಣ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಘಟನೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಆಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠಕ್ಕೆ ಬಿಬಿಎಂಪಿ ಪರ ವಕೀಲರು ಪ್ರಮಾಣ ಪತ್ರ ಸಲ್ಲಿಸಿದರು. ಈ ಅಂಶವನ್ನು ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು.
ಹೈಕೋರ್ಟ್‌ಗೆ ವರದಿ ಸಲ್ಲಿಸಿದ ಬಿಬಿಎಂಪಿ :ಪ್ರಮಾಣ ಪತ್ರ ಸಲ್ಲಿಸಿರುವ ಬೆಂಗಳೂರು ಮಹಾನಗರ ಪಾಲಿಕೆಯ ಪೂರ್ವ ಭಾಗದ ರಸ್ತೆ ಮತ್ತು ಮೂಲಭೂತ ಸೌಲಭ್ಯಗಳ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಎಚ್.ಎಸ್. ಪ್ರಿಯದರ್ಶಿನಿ ಅವರು, ಬಳ್ಳಾರಿ ರಸ್ತೆ ಅಗಲೀಕರಣ ಸಂಬಂಧ ಹೈಕೋರ್ಟ್ ನೀಡಿದ್ದ ಸೂಚನೆಯಂತೆ ಮೇಖ್ರಿ ವೃತ್ತದಿಂದ ಕಾವೇರಿ ಚಿತ್ರಮಂದಿರದವರೆಗೂ ರಸ್ತೆ ಅಗಲೀಕರಣ ಕಾಮಗಾರಿ ಪ್ರಾರಂಭವಾಗಿದ್ದು, ಪ್ರಗತಿಯಲ್ಲಿದೆ. ಸುಮಾರು 1260 ಮೀಟರ್ ಉದ್ದವಿರುವ ಈ ಮಾರ್ಗ ಮೇಖ್ರಿ ವೃತ್ತದಿಂದ ಆರು ಪಥಗಳ ರಸ್ತೆಯಿದ್ದು, ಗಾಯಿತ್ರಿ ವಿಹಾರ್ ಬಳಿ ಸಣ್ಣದಾಗಿ ಕೇವಲ ಎರಡು ಪಥಗಳಾಗಿವೆ.
ಅರಮನೆ ಮೈದಾನದ ದ್ವಾರದ ಸಂಖ್ಯೆ ನಾಲ್ಕರಿಂದ ಕಾವೇರಿ ಚಿತ್ರಮಂದಿರದವರೆಗೂ ಕೇವಲ ಎರಡು ಪಥಗಳಾಗಿದೆ. ಈ ಭಾಗದ ಉದ್ದ 630 ಮೀಟರ್‌ಗಳಾಗಿದ್ದು, ಅಗಲ 3 ರಿಂದ 3.5 ಮೀಟರ್‌ನಷ್ಟಿದೆ. ಇದೀಗ ರಸ್ತೆ ಅಗಲೀಕರಣ ಮಾಡುತ್ತಿದ್ದು ಕಾಮಗಾರಿ ಪೂರ್ಣಗೊಂಡ ಬಳಿಕ ಅಗಲ 7.5 ರಿಂದ 9.5ಕ್ಕೆ ಹೆಚ್ಚಳವಾಗಲಿದೆ. ಇದರಿಂದಾಗಿ ಈವರೆಗೂ ಎರಡೂ ಮಾರ್ಗಗಳಲ್ಲಿ ಕೇವಲ ಎರಡು ಪಥಗಳಿರುವ ರಸ್ತೆ ಮೂರು ಪಥಗಳಾಗಿ ಬದಲಾಗಲಿದೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.