ಬೆಂಗಳೂರು:ಎರಡು ಬಾರಿ ಮುಂದೂಡಲ್ಪಟ್ಟ ಬಿಬಿಎಂಪಿಯ 12 ಸ್ಥಾಯಿಸಮಿತಿಗಳ ಚುನಾವಣೆಗೆ ಕಡೆಗೂ ದಿನಾಂಕ ನಿಗದಿಯಾಗಿದ್ದು, ಡಿಸೆಂಬರ್ 30ರಂದು ನಡೆಯಲಿದೆ.
ಬಿಬಿಎಂಪಿ ಕೇಂದ್ರ ಕಚೇರಿಯ ಪೌರಸಭಾಂಗಣದಲ್ಲಿ 11-30 ಕ್ಕೆ ಚುನಾವಣೆ ನಡೆಸಲು ಚುನಾವಣಾ ಸಭೆ ಕರೆಯಲಾಗಿದೆ ಎಂದು ಪ್ರಾದೇಶಿಕ ಚುನಾವಣಾ ಆಯುಕ್ತರಾದ ಡಾ.ಹರ್ಷಗುಪ್ತಾ ಅಧಿಸೂಚನೆ ಹೊರಡಿಸಿದ್ದಾರೆ.
ಡಿಸೆಂಬರ್ 30ಕ್ಕೆ ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆ ನಿಯಮದ ಪ್ರಕಾರ ಮೇಯರ್, ಉಪಮೇಯರ್ ಆಯ್ಕೆಯಂದೇ ಅಕ್ಟೋಬರ್ 1ಕ್ಕೆ ಚುನಾವಣೆ ನಿಗದಿಯಾಗಿತ್ತು. ಆದರೆ ಯಾರೂ ನಾಮಪತ್ರ ಸಲ್ಲಿಕೆ ಮಾಡದ ಕಾರಣ ಮುಂದೂಡಿಕೆಯಾಗಿತ್ತು. ಬಳಿಕ ಡಿಸೆಂಬರ್ 4 ರಂದು ಟೌನ್ ಹಾಲ್ನಲ್ಲಿ ಚುನಾವಣೆ ನಿಗದಿಪಡಿಸಿದರೂ, ಕೋರಂ ಕೊರತೆ ಹಾಗೂ ನಾಮಪತ್ರ ಸಲ್ಲಿಕೆ ಮಾಡದ ಕಾರಣ ಮತ್ತೊಂದು ಬಾರಿ ಮುಂದೂಡಲಾಯ್ತು. ಇದೀಗ ಮೂರನೇ ಬಾರಿಗೆ ಡಿಸೆಂಬರ್ 30 ರಂದು ದಿನಾಂಕ ನಿಗದಿಪಡಿಸಲಾಗಿದೆ.
ಈಗಾಗಲೇ ಸ್ಥಾಯಿ ಸಮಿತಿ ಇಲ್ಲದೆ ಬಿಬಿಎಂಪಿ ಆಡಳಿತ ಒಂದು ತಿಂಗಳಿಂದ ನಡೆಯುತ್ತಿದೆ. ಹೀಗಾಗಿ ಈ ಬಾರಿ ಚುನಾವಣೆ ನಡೆಯುವುದು ಖಚಿತವಾಗಿದೆ. ಆದರೆ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಹೆಚ್ಚಾಗಿದ್ದು, ಕಾಂಗ್ರೆಸ್ನಿಂದ ಬಿಜೆಪಿ ಪಕ್ಷಕ್ಕೆ ಪಕ್ಷಾಂತರವಾದವರು, ಉಪಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲಿಸಿರುವ ಪಾಲಿಕೆ ಸದಸ್ಯರು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ.
ಪ್ರಬಲ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಸೇರಿದಂತೆ ಪ್ರಮುಖ ಸ್ಥಾಯಿ ಸಮಿತಿಗಳಿಗೆ ಸದಸ್ಯರ ಬೇಡಿಕೆ ಹೆಚ್ಚಾಗಿದೆ. ನಾಲ್ಕು ವರ್ಷದಿಂದ ಅಧಿಕಾರಕ್ಕಾಗಿ ಕಾಯುತ್ತಿದ್ದ, ಮೂಲ ಬಿಜೆಪಿ ಪಾಲಿಕೆ ಸದಸ್ಯರಲ್ಲಿಯೂ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ.